ಕಾಲುಬಾಯಿ ರೋಗ ಉಲ್ಬಣಕ್ಕೆ ಬಿಜೆಪಿ ನೇರ ಹೊಣೆ
ಕ.ಪ್ರ.ವಾರ್ತೆ , ತುಮಕೂರು , ಜ.19
ಕೇಂದ್ರ ಸರ್ಕಾರ ಕಳೆದ 4 ವರ್ಷಗಳ ಕಾಲ ಬಿಡುಗಡೆ ಮಾಡಿದ್ದ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಹಣವನ್ನು ಸಮರ್ಪಕವಾಗಿ ಖರ್ಚು ಮಾಡದೇ ಇರುವುದೇ ಇಂದು ರಾಜ್ಯದಲ್ಲಿ ರೋಗ ಉಲ್ಬಣಕ್ಕೆ ಕಾರಣವಾಗಿದೆ. ಬೇಜವಾಬ್ದಾರಿತನ ಪ್ರದರ್ಶಿಸಿರುವ ಬಿಜೆಪಿ ಸರ್ಕಾರ ಇದಕ್ಕೆ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೇರವಾಗಿ ಆರೋಪಿಸಿದರು.
ಅವರು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಅಡಿಫ್ ಯೋಜನೆಯಡಿಯಲ್ಲಿ ವಿಕಲ ಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಕಾಲು ಬಾಯಿ ರೋಗಕ್ಕೆ ನಿಗದಿತವಾಗಿ, ಪೋಲಿಯೊ ಲಸಿಕೆ ಮಾದರಿಯಲ್ಲಿ ರಾಸುಗಳಿಗೆ ಲಸಿಕೆ ನೀಡುವಲ್ಲಿ ವಿಫಲವಾದುದೇ ಪ್ರಸ್ತುತ ವರ್ಷದಲ್ಲಿ ರಾಜ್ಯದಲ್ಲಿ ಕಾಲುಬಾಯಿ ಜ್ವರ ಉಲ್ಬಣಗೊಳ್ಳಲು ಕಾರಣವಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದೆಲ್ಲೆಡೆ ರಾಸುಗಳಿಗೆ ಕಾಲು ಬಾಯಿ ಜ್ವರ ಉಲ್ಬಣಗೊಂಡು ಸುಮಾರು 15 ಸಾವಿರಕ್ಕೂ ಹೆಚ್ಚಿನ ರಾಸುಗಳು ಮೃತಪಟ್ಟವು. ರಾಸುಗಳ ಸಾವಿಗೆ ತಮ್ಮ ಸರ್ಕಾರ ಕಾರಣರಲ್ಲ, ನಮಗಿಂತಲೂ ಮೊದಲು ರಾಜ್ಯದ ಆಡಳಿತ ನಡೆಸಿದವರು ಕಾರಣ. ಆದರೆ ನಮಗೆ ಕೆಟ್ಟ ಹೆಸರು ಬರುವಂತಾಯಿತು ಎಂದು ವಿಷಾದಿಸಿದರು.
ಪಲ್ಸ್ ಪೋಲಿಯೋ ಮಾದರಿಯಲ್ಲಿಯೇ ಇಂದು ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ. ವರ್ಷಕ್ಕೆ ಎರಡು ಬಾರಿ ಪ್ರಾಣಿಗಳಿಗೂ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಕಾಲುಬಾಯಿ ಜ್ವರ ಸೇರಿದಂತೆ ಯಾವುದೇ ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ಕಳೆದ 4 ವರ್ಷಗಳಿಂದ ಭಾರತ ಸರ್ಕಾರದಿಂದ ಈ ಲಸಿಕೆ ಕಾರ್ಯಕ್ರಮಕ್ಕೆ ಬಿಡುಗಡೆಯಾಗಿದ್ದ ಹಣ ಖರ್ಚು ಮಾಡಿಲ್ಲ. ಪರಿಣಾಮ ಜಾನುವಾರುಗಳು ಸಾವಿಗೀಡಾದವು. ಕಾಲುಬಾಯಿ ಜ್ವರ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಂಡವು ಈಗ ಸಮರೋಪಾದಿಯಲ್ಲಿ ಎಲ್ಲೆಡೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡ ಮೇಲೆ ಆ ರೋಗ ನಿಯಂತ್ರಣಕ್ಕೆ ಬಂದಿದೆ. ತಪ್ಪು ಮಾಡಿದ್ದು ಬಿಜೆಪಿ. ಆದರೆ ಕೆಟ್ಟ ಹೆಸರು ಬಂದಿದ್ದು ಕಾಂಗ್ರೆಸ್ಗೆ ಎಂದು ಸಚಿವರು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಎಸ್. ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.