ಖೋ ಖೋ: ಕರ್ನಾಟಕ ಚಾಂಪಿಯನ್
ತುಮಕೂರು: ಇಲ್ಲಿ ನಡೆದ 59ನೇ 14ನೇ ವರ್ಷದೊಳಗಿನ ಬಾಲಕ -ಬಾಲಕಿಯರ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಯಲ್ಲಿ ಕರ್ನಾಟಕದ ಬಾಲಕ-ಬಾಲಕಿಯರು ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.
59 ವರ್ಷಗಳ ಸ್ಕೂಲ್ ಗೇಮ್ಸ್ ಇತಿಹಾಸದಲ್ಲಿಯೇ ಕರ್ನಾಟಕ ಬಾಲಕ- ಬಾಲಕಿಯರು ಮೊದಲ ಬಾರಿಗೆ ಖೋ-ಖೋ ಪಂದ್ಯಾವಳಿಯಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ್ದು, ಸಚಿನ್ ತೆಂಡೂಲ್ಕರ್ ಅಂಕಣದಲ್ಲಿ ನಡೆದ ಬಾಲಕಿಯರ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬಾಲಕಿಯರು ಛತ್ತಿಸ್ಗಡ ತಂಡವನ್ನು 12-6 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಅದೇ ರೀತಿ ಬಾಲಕರ ವಿಭಾಗದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕರ್ನಾಟಕ ಬಾಲಕರು ಆಂಧ್ರವನ್ನು 18-6 ಅಂತರದಿಂದ ಸೋಲಿಸಿ ಮೊದಲಬಾರಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ಮೊದಲ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿವೆ. ಬಾಲಕಿಯರಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾನ ಪಡೆಯಿತು.
ಭಾನುವಾರ ಬೆಳಗ್ಗೆ ಆರಂಭವಾದ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಓಟವನ್ನು ಆಯ್ದುಕೊಂಡ ಕರ್ನಾಟಕ ತಂಡ ಮೊದಲಾರ್ಧದ ಏಳು ನಿಮಿಷದ ಆಟದಲ್ಲಿ ಎದುರಾಳಿ ತಂಡದ 13 ಜನ ಆಟಗಾರ್ತಿಯರನ್ನು ಔಟ್ ಮಾಡಿದರೆ, ಆಂಧ್ರಪ್ರದೇಶ ಕೇವಲ 3 ಅಂಕವನ್ನು ಪಡೆಯಲಷ್ಟೇ ಶಕ್ತವಾಯಿತು. ಕರ್ನಾಟಕಪರ ತಂಡದ ನಾಯಕಿ ಲಕ್ಷ್ಮಿಅಣೆಸೂರ್ 3.30 ನಿಮಿಷ ಆಟವಾಡಿಸಿ 5 ಜನರನ್ನು ಔಟ್ ಮಾಡಿದರೆ, ಮಾಲಾಶ್ರೀ 3 ನಿಮಿಷ್ ಆಟವಾಡಿ 4 ಔಟ್ ಮಾಡಿದರೆ ರಾಧಿಕ ನಾಲ್ಕು ಔಟ್ ಪಡೆದರು.
ಎರಡನೇ ಅರ್ಧ ಮ್ಯಾಚ್ನಲ್ಲಿ ಛತ್ತೀಸ್ಗಡಕ್ಕೆ ಇಳಿದ ಕರ್ನಾಟಕ ಪುನಃ ಮೂರು ಔಟ್ ಮಾಡಿದರೆ ಅಂತರವನ್ನು 16 ಕ್ಕೆ ಹೆಚ್ಚಿಸಿಕೊಂಡರೆ, ಛತ್ತೀಸ್ಗಡ 3 ಔಟ್ ಮಾಡಿ ಒಟ್ಟಾರೆ 16-6 ಅಂತರದಿಂದ ಕರ್ನಾಟಕದ ಎದುರು ಸೋಲು ಒಪ್ಪಿಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ರನ್ನರ್ ಆಗಿ ಮಹಾರಾಷ್ಟ್ರದ ಮಯೂರಿ,
ಬೆಸ್ಟ್ ಡಿಪೆಂಡರ್ ಆಗಿ ಪ್ರತೀಮ ಮತ್ತು ಆಲ್ ರೌಂಡರ್ ಆಗಿ ಕರ್ನಾಟಕದ ಮಾಲಾಶ್ರೀ ಆಯ್ಕೆಯಾಗಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದರು.
ಬಾಲಕರ ಉತ್ತಮ ಆಟ: ಇದೇ ಅಂಕಣದಲ್ಲಿ ಸಾವಿರಾರು ಪ್ರೇಕ್ಷಕರು ಶಿಳ್ಳೆ ಚಪ್ಪಾಳೆಗಳೊಂದಿಗೆ ಆರಂಭವಾದ ಕರ್ನಾಟಕ ಬಾಲಕರು ಮತ್ತು ಆಂಧ್ರಪ್ರದೇಶ ಬಾಲಕರ ನಡುವಿನ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಂಧ್ರ ರನ್ನಿಂಗ್ ಆಯ್ದುಕೊಂಡಿದ್ದು, ಮೊದಲಾರ್ಧದಲ್ಲಿ ಕರ್ನಾಟಕದ ಆಟಗಾರರು ಎದುರಾಳಿ ತಂಡದ ಮೇಲೆ ಹುಲಿಯಂತೆ ಎಗರಿ ಏಳು ನಿಮಿಷಗಳಲ್ಲಿ 10 ಜನರನ್ನು ಔಟ್ ಮಾಡಿದರೆ, ಆಂಧ್ರಪ್ರದೇಶ ಕೇವಲ 2 ಔಟ್ ಮಾಡಲಷ್ಟೇ ಶಕ್ತವಾಯಿತು.
ಕರ್ನಾಟಕದ ಪರವಾಗಿ ಚಿದಾನಂದ 3.30 ನಿಮಿಷ ಆಟವಾಡಿದರೆ, ಗಂಗಪ್ಪ 1.10 ನಿಮಿಷ ಆಟವಾಡಿ 1 ಔಟ್ ಮಾಡಿ ಗಮನ ಸೆಳೆದರು. ಮತ್ತೊಬ್ಬ ಆಟಗಾರ ಮಂಜುನಾಥ್ 1.20 ನಿಮಿಷ ಆಟವಾಡಿ 3 ಔಟ್ ಪಡೆದರು.
ದ್ವಿತಿಯಾರ್ಧದಲ್ಲಿ ಕರ್ನಾಟಕದ ಬಾಲಕರು ಚುರುಕಿನ ಆಟವಾಡಿ ಏಳು ನಿಮಿಷಗಳಲ್ಲಿ 8 ಜನರನ್ನು ಔಟ್ ಮಾಡಿ ತನ್ನ ಅಂಕವನ್ನು 18 ಕ್ಕೆ ಹೆಚ್ಚಿಸಿಕೊಂಡರೆ ಆಂಧ್ರಪ್ರದೇಶ ಬಾಲಕರು ಏಳು ನಿಮಿಷದಲ್ಲಿ 4 ಜನರನ್ನು ಔಟ್ ಮಾಡಿ 18-6 ರಿಂದ ಕರ್ನಾಟಕದ ಎದುರು ಸೋಲು ಒಪ್ಪಿಕೊಂಡಿತು.
ಬಾಲಕರ ವಿಭಾಗದಲ್ಲಿ ಬೆಸ್ಟ್ ರನ್ನರ್ ಆಗಿ ಪ್ರಥಮೇಶ್ ಛತ್ತಿಸ್ಗಡ, ಬೆಸ್ಟ್ ಡಿಪೆಂಡರ್ ಆಗಿ ಆಂಧ್ರಪ್ರದೇಶದ ಮಹೇಶ್ ಮತ್ತು ಆಲ್ ರೌಂಡರ್ ಆಗಿ ಕರ್ನಾಟಕದ ಮಂಜುನಾಥ್ ತಿಗಡಿ ವೈಯುಕ್ತಿಕ ಬಹುಮಾನವನ್ನು ಪಡೆದರು.