ಪೋಲಿಯೊ ಹನಿ ಮೂಲಕ ಅಂಗವೈಕಲ್ಯ ತಡೆ
ಕ.ಪ್ರ.ವಾರ್ತೆ , ತುಮಕೂರು , ಜ.19
ಪೋಲಿಯೊ ಹನಿ ಹಾಕಿಸುವ ಮೂಲಕ ಅಂಗವೈಕಲ್ಯ ಮತ್ತಿತರೆ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ದೇಶದಲ್ಲಿ ಆಂದೋಲನ ರೀತಿಯಲ್ಲಿ ರೋಟರಿ ಕ್ಲಬ್ ಸೇರಿದಂತೆ ಇತರೆ ಸ್ವಯಂಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಭಾರತವನ್ನು ಅಂಗವಿಕಲತೆಯಿಂದ ಮುಕ್ತಮಾಡಬೇಕು ಎನ್ನುವುದೇ ಕೇಂದ್ರ ಸರ್ಕಾರದ ಆಶಯ, ಈ ಹಿನ್ನೆಲೆಯಲ್ಲಿ ವರ್ಷಕ್ಕೆ ಎರಡು ಬಾರಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿಕಲಚೇತನಕ್ಕೆ ಮೂಲ ಕಾರಣ ಪೋಲಿಯೊ ಇದು ಬರದಂತೆ ತಡೆಯುವ ಕಾರ್ಯ ಆಗಬೇಕಿದೆ, ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪೋಲಿಯೊ ಮುಕ್ತ ದೇಶ ಎಂದು ಘೋಷಿಸಲಾಗಿದೆ ಎಂದರು.
ಪ್ರಪಂಚದಲ್ಲಿ ಚೈನಾವನ್ನು ಬಿಟ್ಟರೆ ಭಾರತ ದೊಡ್ಡ ದೇಶವಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಜನರ ಸಾಮಾಜಿಕ ಜವಾಬ್ದಾರಿ ಅಗತ್ಯವಾಗಿದೆ. ಬಡತನ, ಪೌಷ್ಟಿಕಾಂಶದ ಕೊರತೆಯಿಂದ ಹಲವು ಕಾಯಿಲೆಗಳು ಕಾಣಿಸಿಕೊಳ್ಳುವುದು ಸಹಜ, ಆದರೆ ಸಾಮಾಜಿಕ ಜವಾಬ್ದಾರಿಯಿಂದ ಇಂತಹ ರೋಗ ನಿವಾರಣೆಗೆ ಪ್ರತಿಯೊಬ್ಬರೂ ಶ್ರಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ವಿಕಲಚೇತನ: ಜಿಲ್ಲೆಯ ಕೆಲ ಭಾಗಗಳಲ್ಲಿ ಫ್ಲೋರೈಡ್ ಯುಕ್ತ ನೀರು ಕುಡಿದು ಹಲವರಿಗೆ ತೊಂದರೆ ಉಂಟಾಗಿ ಅಂಗಾಂಗಳ ಸಮಸ್ಯೆ ಎದುರಾಗಿ ವಿಕಲಚೇತನರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ ಎಂದು ನುಡಿದರು.
ಯಾವುದೇ ಕಾರ್ಯಚಟುವಟಿಕೆಗಳು ಯಶಸ್ವಿಯಾಗಬೇಕಾದರೆ ಜನಸಾಮಾನ್ಯರ ಸಹಕಾರದ ಜೊತೆಗೆ ಸೇವಾ ಮನೋಭಾವ ಇರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಕಾರವೂ ಮುಖ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಎಸ್. ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.