ಮಕ್ಕಳು ಮುಂದಿನ ಪ್ರಜೆಗಳಲ್ಲ, ಇಂದಿನ ಪ್ರಜೆಗಳು: ಡಾ.ಮಂಜುನಾಥ ಅಭಿಮತ
ಕ.ಪ್ರ.ವಾರ್ತೆ , ತುಮಕೂರು , ಜ.19
ಮಕ್ಕಳ ಗ್ರಾಮ ಸಭೆಯು ಮಕ್ಕಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರವೃತ್ತಿಯನ್ನು ಮೂಡಿಸುವುದಲ್ಲದೆ, ಅವರು ವಯಸ್ಕರಾದಾಗ ಸಕ್ರೀಯ ನಾಗರಿಕರಾಗಲು ಮಕ್ಕಳ ಗ್ರಾಮ ಸಭೆ ಸಹಾಯಕವಾಗುತ್ತದೆ ಎಂದು ಸಿಎಂಸಿಯ ಸಂಸ್ಥಾಪಕ ನಿರ್ದೇಶಕ ಡಾ. ಮಂಜುನಾಥ ಸದಾಶಿವ ಅಭಿಪ್ರಾಯಪಟ್ಟರು.
ಅವರು ಶಿರಾ ತಾಲೂಕು ಶೀಬಿ ಗ್ರಾ.ಪಂ., ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಿ.ಎಂ.ಸಿ.ಎ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮಸಭೆ ಕುರಿತು ಮಾತನಾಡಿದರು.
ಮಕ್ಕಳ ಗ್ರಾಮಸಭೆಗೆ ಶೀಬಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ಶಾಲೆ, ಗ್ರಾಮ ಮತ್ತು ಇನ್ನಿತರೆ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಕೇಳಿದರು. ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಅವರು ಹಾಗೂ ಶೀಬಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜಣ್ಣನವರು, ಉಪಾಧ್ಯಕ್ಷ ಪಾತಲಿಂಗಯ್ಯ, ಮಾಜಿ ಅಧ್ಯಕ್ಷ ರಾಜಣ್ಣನವರು ಹಾಗೂ ಶಿರಾ ತಾ.ಪಂ. ಉಪಾಧ್ಯಕ್ಷೆ ಉದಯ್ ಶಂಕರ್ ಮುಂತಾದರರು ಮಕ್ಕಳ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದರು. ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರಶ್ನೆಗಳು ಮುಖ್ಯವಾಗಿ ಶಾಲಾ ಕೊಠಡಿ, ಶಾಲಾ ಕಾಂಪೌಂಡ್, ಆಟದ ಮೈದಾನ, ಚರಂಡಿ, ಕುಡಿಯುವ ನೀರು, ರಸ್ತೆ, ಶೌಚಾಲಯ ಮುಂತಾದ ವಿಷಯಕ್ಕೆ ಸಂಬಂಧಿಸಿದ್ದವು. ಮಕ್ಕಳ ಗ್ರಾಮ ಸಭೆಯಲ್ಲಿ ಸಿ.ಎಂ.ಸಿ.ಎ ಟ್ರಸ್ಟಿಗಳಾದ ಪ್ರಿಯಾ ಕೃಷ್ಣಮೂರ್ತಿ, ಕಾರ್ಯಕ್ರಮಾಧಿಕಾರಿ ಮರುಳಪ್ಪನವರು, ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಕೆ.ಟಿ. ತಿಪ್ಪೇಸ್ವಾಮಿ, ನಿರ್ದೇಶಕರಾದ ರಮೇಶ್ ಬಾಬು, ಸಂಯೋಜಕರಾದ ರಂಗರಾಜು, ಪೌರಶಿಕ್ಷಕಿ ಮಂಜುಳ ಮತ್ತು ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 31 ಪ್ರಶ್ನೆಗಳನ್ನು ಕೇಳಲಾಯಿತು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಕಾಲಮಿತಿಯೊಳಗೆ ನೆರವೇರಿಸಿಕೊಡಲಾಗುವುದೆಂದು ಗ್ರಾ. ಪಂ. ಅಧ್ಯಕ್ಷರಾದ ರಾಜಣ್ಣ ತಿಳಿಸಿದರು.