ಮಾನವ ಗುಣಗಳ ಗಣಿಯಾದರೆ ವಿಕೃತಿ ನಿವಾರಣೆ
ಕ.ಪ್ರ.ವಾರ್ತೆ , ತುಮಕೂರು , ಜ.19
ಮಾನವ ಗುಣಗಳ ಗಣಿಯಾದರೆ ಸಾಮಾಜಿಕ ಜೀವನದಲ್ಲಿ ವಿಕೃತಿ ನಿವಾರಣೆಯಾಗಿ ಸುಕೃತಿ ಉಂಟಾಗುತ್ತದೆ ಎಂದು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಭಗವಾನ್ (ದೊರೆ) ಹೇಳಿದರು.
ನಗರದ ಹಿರೇಮಠದ ಆವರಣದಲ್ಲಿ ಹಾಲಪ್ಪ ಪ್ರತಿಷ್ಠಾನದಿಂದ ಬಿಡುಗಡೆಯಾದ ಸಂಚಲನ ಅಂಕಣ ಬರಹಗಳ ಕೃತಿಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ, ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿರುವ ಅಂಕಣದಲ್ಲಿ ಮೌಲಿಕವಾದ ಬರಹಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಕಲೆಗೆ ಮೇರುಪರ್ವತ ಡಾ. ರಾಜಕುಮಾರ್, ಅದೇ ರೀತಿ ಬರವಣಿಗೆಯಲ್ಲಿ ಡಾ. ಶಿವಾನಂದಶಿವಾಚಾರ್ಯ ಸ್ವಾಮೀಜಿ ಸಾಹಿತ್ಯ ಲೋಕದ ರಾಜಕುಮಾರ್ ಎಂದು ಬಣ್ಣಿಸಿದರು.
ಪ್ರತಿಯೊಂದು ಬರಹದಲ್ಲಿ ಸಮಾಜಕ್ಕೆ ಸಂದೇಶವಿದೆ. ನಡೆದಂತೆ ನುಡಿಯುವ ಶ್ರೀಗಳು ಧರ್ಮದ ವೈಚಾರಿಕತೆ, ಮಾನವನದ ಉನ್ನತಿಗೆ ಬೇಕಾದ ಆಚಾರ, ವಿಚಾರಗಳನ್ನು ಪುಟಕ್ಕಿಟ್ಟ ಚಿನ್ನದಂತೆ ಮಾಡಿದ್ಧಾರೆ. ಮತಧರ್ಮಕ್ಕಿಂತ ಮಾನವ ಧರ್ಮ ಅನುಸರಿಸಬೇಕೆನ್ನುವ ಶ್ರೀಗಳ ಕಳಕಳಿ ನಿಜಕ್ಕೂ ಮನುಷ್ಯ ಹೃದಯದಲ್ಲಿ ಸ್ಥಾಪನೆಯಾಗಬೇಕು. ಆಸ್ತಿ ಬೇಕು, ಅಪ್ಪ, ಅಮ್ಮ ಬೇಡ ಎನ್ನುವ ಅಮಾನವೀಯ ಸಂದರ್ಭದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಂತಹ ಆಶ್ರಮಗಳಿರಬಾರದು. ಮಕ್ಕಳು ಪೋಷಕರನ್ನು ಅತ್ಯಂತ ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳಬೇಕು. ಇಂತಹ ಆಶಯ ಹೊಂದಿರುವ ಮಾಗಿ ಚಲನಚಿತ್ರಕ್ಕೆ ನಾನು ಅಧ್ಯಕ್ಷನಾಗಿದ್ದ ಸಮಿತಿಯಿಂದ ಪ್ರಥಮ ಬಹುಮಾನ ನೀಡಿದ್ದೇನೆ ಎಂದರು.
ಕೊಡುಗೆ ನೀಡಲಿ: ಮನುಷ್ಯ ಯಾವತ್ತೂ ಸಮಾಜದಿಂದ ನಿರೀಕ್ಷಿಸದೆ ಕೊಡುಗೆಯನ್ನು ನೀಡಬೇಕು. ಈವರೆಗೆ 54 ಕನ್ನಡ ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಅವುಗಳಲ್ಲಿ 24 ಚಲನಚಿತ್ರಗಳಿಗೆ ಸಾಹಿತಿಗಳ ಕಾದಂಬರಿಗಳನ್ನು ಬಳಸಿಕೊಂಡಿದ್ದೇನೆ ಎಂದರು. 1958 ರಿಂದ ವರನಟ ಡಾ. ರಾಜಕುಮಾರ್ ಜತೆ ಬೆಳೆದ ಸ್ನೇಹ ಅವರು ಇಲ್ಲವಾದರೂ ಮುಂದುವರೆದಿದೆ. ಅವರೊಬ್ಬ ಅಪ್ಪಟ ಮನುಷ್ಯ. ಮುಗ್ದ ಮನಸ್ಸಿನ ವ್ಯಕ್ತಿ. ಸ್ನೇಹಜೀವಿ, ಹೃದಯಸಂಪನ್ನ. ಅವರಿಂದ ನಾನು ಕಲಿತದದ್ದು ಬಹಳವಾಗಿದೆ. ಶ್ರೀಗಳು ಸಹ ಅಂತಹ ಮನಸ್ಸಿನ ಜ್ಞಾನಿ. ಅಂತಹವರ ಒಡನಾಟ ಜೇನು ಸವಿದಂತೆ ಎಂದು ಸ್ಮರಿಸಿಕೊಂಡರು.
ಡಾ. ಶಿವಾನಂದಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗಂಗಾಧರ್ ಕೊಡ್ಲಿಯವರ್ ಕೃತಿ ಕುರಿತು, ಮುಖ್ಯಅತಿಥಿಯಾಗಿ ವಿ.ಪ. ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿದರು. ಹೋಟೆಲ್ ಉದ್ಯಮಿ ಸಿ.ವಿ. ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಹಾಲಪ್ಪ ಟ್ರಸ್ಟಿನ ಅಧ್ಯಕ್ಷ ಮುರುಳೀಧರ ಹಾಲಪ್ಪ ಉಪಸ್ಥಿತರಿದ್ದರು. ಗಾಯಕಿ ರೂಪಾ ನಾಗೇಂದ್ರ ಪ್ರಾರ್ಥಿಸಿ, ವಿಶ್ವನಾಥ್ ಸ್ವಾಗತಿಸಿದರು. ಸುಮಾಪ್ರಸನ್ನ ವಂದಿಸಿದರು. ಮುಷ್ತಾಕ್ ಅಹಮದ್ ನಿರೂಪಿಸಿದರು.