ಮೂಲ ಸೌಕರ್ಯ ಇಲ್ಲದೆ ನರಕಯಾತನೆ
ಮಧುಗಿರಿ ಪುರಸಭೆ ವ್ಯಾಪ್ತಿಯ 23ನೇ ವಾರ್ಡ್ನ ಕರಡಿಪುರ ಮತ್ತು ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ರಸ್ತೆ,ಚರಂಡಿ, ಬೀದಿ ದೀಪ, ಶುದ್ಧ ಕುಡಿವ ನೀರಿಲ್ಲದೇ ಜನತ ಪರದಾಡುತ್ತಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನ, ಮನೆ ಇಲ್ಲದ ಕಡು ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದರು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ಜನರು ಜೀವನ ನಿರ್ವಹಣೆಗೆ ನರಕ ಯಾತನೇ ಪಡುತ್ತಾರೆ. ಇಲ್ಲಿ ಕಡು ಬಡವರೇ ಹೆಚ್ಚು ವಾಸಿಸುತ್ತಾರೆ. ಈ ಪ್ರದೇಶ ಬಹುತೇಕ ಗುಡ್ಡ, ದಿನ್ನೇಯಿಂದ ಕೂಡಿದೆ. ಇದರಿಂದ ಸಮರ್ಪಕ ರಸ್ತೆಗಳಿಲ್ಲ. ಶುದ್ಧ ಕುಡಿವ ನೀರಿಲ್ಲ ಪುರಸಭೆಯವರು ಸಕಾಲದಲ್ಲಿ ನೀರು ಬಿಡುವುದಿಲ್ಲ. ಖಾಸಗಿ ಜಮೀನು ಬೋರವೆಲ್ಗೆ ತೆರಳಿ ನಿತ್ಯ ಜೀವನ ನಡೆಸಬೇಕು ಎಂಬುದು ಈ ಭಾಗದ ಜನರ ಅಳಲು. ಇನ್ನು ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟೆ ಪೊದೆಗಳಲ್ಲಿ ವಿಷಪೂರಿತ ಹಾವು, ಚೇಳುಗಳದ್ದೇ ಕಾರು ಬಾರು, ಮಕ್ಕಳು ಮರಿ ಕಟ್ಟಿಕೊಂಡು ಆತಂಕದಲ್ಲೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಹೀಗೆ ಹತ್ತು ಹಲವು ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸೌಲಭ್ಯ ಕಲ್ಪಿಸಬೇಕು ಎಂಬುದು ಈ ಭಾಗದ ಜನರ ಅಭಿಮತ.
ಚರಂಡಿಯಲ್ಲಿ ನಿಂತಿರುವ ಕೊಚ್ಚೆ
ಮಧುಗಿರಿಯ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಬಡಾವಣೆಯಲ್ಲಿ ಚರಂಡಿಯಲ್ಲಿ ನಿಂತಿರುವ ಕೊಚ್ಚೆ ಏಕಶಿಲಾ ಬೆಟ್ಟದೂರು ಮಧುಗಿರಿಯಲ್ಲಿ ದಿನ ಬೆಳಗಾದರೆ ಬೆಟ್ಟದಷ್ಟು ಸಮಸ್ಯೆಗಳು ಚಾದರ ಹೊದ್ದು ಮಲಗಿ ಇಲ್ಲಿನ ನಾಗರಿಕರನ್ನು ಕಾಡುತ್ತಿವೆ. ಮಧುಗಿರಿ ಮೊದಲೇ ಬೆಟ್ಟ, ಗುಡ್ಡ, ಹಳ್ಳ, ದಿನ್ನೆ ತಗ್ಗು ಪ್ರದೇಶಗಳಿಂದ ರಚಿತವಾದ ಪ್ರದೇಶ. ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು, ಬಹುತೇಕ ಎಲ್ಲ ವಾರ್ಡ್ಗಳಲ್ಲೂ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.
ಇಂದಿನ ಆಧುನಿಕತೆಗೆ ತಕ್ಕಂತೆ ಪುರಸಭೆಯ ಎಲ್ಲ ದಿಕ್ಕಿನಲ್ಲೂ ಹೊಸ ಹೊಸ ಬಡಾವಣೆಗಳು ತಲೆ ಎತ್ತಿದ್ದು ಪಟ್ಟಣದ ಅಜು- ಬಾಜಿನಲ್ಲಿರುವ ಕೃಷಿ ಭೂಮಿ ಸೇರಿದಂತೆ ಸರ್ಕಾರದ ಬೆಟ್ಟ, ಗುಡ್ಡ ಹೊಂದಿರುವ ಭೂಮಿ ಕೂಡ ಮನ ಬಂದಂತೆ ಹೊಸ ಬಡಾವಣೆಗಳು ಒತ್ತುವರಿ ಹೆಸರಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರಿಗೆ ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.
ಪಟ್ಟಣದ 22ನೇ ವಾರ್ಡ್ ರಾಘವೇಂದ್ರ ಬಡಾವಣೆ ಡಾಲರ್ಸ್ ಕಾಲೋನಿ ಎಂದೇ ಖ್ಯಾತಿ ಪಡೆದಿದೆ. ಇಲ್ಲಿ ಮನೆಗಳು ಅಪಾರ್ಟ್ಮೆಂಟ್ ರೀತಿ ಕಾಂಕ್ರೀಟ್ ಕಾಡಾಗಿ ಆಕರ್ಷಕವಾಗಿ ನಿರ್ಮಾಣವಾಗುತ್ತಿವೆ. ಆದರೂ ಸಮರ್ಪಕ ಚರಂಡಿ, ರಸ್ತೆ, ಸ್ವಚ್ಛತೆ ಶುದ್ಧ ನೀರಿಲ್ಲದೆ ಭಣಗುಡುತ್ತಿದೆ. ಈ ಬಡಾವಣೆ ಹುಟ್ಟಿ ದಶಕಗಳೇ ಕಳೆದಿದ್ದರೂ ಸಿಸಿ, ಡಾಂಬರು ರಸ್ತೆ ಆಗಲಿ ಕಂಡಿಲ್ಲ, ಎಲ್ಲೆಲ್ಲೂ ಧೂಳು ರಸ್ತೆಗಳದ್ದೇ ಕಾರು ಬಾರು. ಖಾಸಗಿ ನಿವೇಶನಗಳಲ್ಲಿ ಬೃಹದಾಕರವಾಗಿ ಬೆಳೆದಿರುವ ಗಿಡ, ಗಂಟೆಗಳಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ನಾಗರಿಕರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಬಳಲುವಂತಾಗಿದೆ. ಪುರಸಭೆ ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಕೈಗೊಂಡಿಲ್ಲ.
ಇಲ್ಲಿನ ಸದಸ್ಯ ಶ್ರೀನಿವಾಸ್ ಈಚೆಗೆ ಸ್ವಚ್ಛತೆ ಕಾರ್ಯ ಕೈಗೊಂಡು ರಸ್ತೆ ಬದಿ, ಚರಂಡಿ ಮೇಲಿದ್ದ ಗಿಡ ಗಂಟೆಗಳನ್ನು ಕಿತ್ತು ಹಾಕುವ ಮೂಲಕ ಸ್ವಚ್ಛತೆಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಆದರೆ ಉತ್ತಮ ಪರಿಸರ ಸಂರಕ್ಷಣೆಗೆ ಪೂರಕವಾಗಿ ಮರಗಿಡಗಳನ್ನು ಬೆಳೆಸಬೇಕಾದುದು ಆದ್ಯ ಕರ್ತವ್ಯ ಎಂಬುದನ್ನು ಮರೆಯಬಾರದು.
ಡಾಂಬರು ಕಿತ್ತು ಹೋಗಿ ಆಳುದ್ದ ಗುಂಡಿ ಬಿದ್ದ ರಸ್ತೆ
ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ ಹತ್ತಾರು ವರ್ಷಗಳಿಂದ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಡಾಂಬರು ಕಿತ್ತು ಹೋಗಿ ಆಳುದ್ದ ಗುಂಡಿ ಬಿದ್ದು ಧೂಳಿಂದ ಕೂಡಿ ಸಂಚರಿಸುವ ವಾಹನಗಳಿಂದ ಏಳುವ ಧೂಳು ಸೇವನೆಯಿಂದ ಮಕ್ಕಳು ಮರಿ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ನರಳುವಂತಾಗಿದೆ. ಈ ಕೆಟ್ಟ ಧೂಳು ರಸ್ತೆ ಸರಿಪಡಿಸಲು ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೀನಮೇಶ ಎಣಿಸುತ್ತಿದ್ದಾರೆ.
ಪಟ್ಟಣದ ತುಮಕೂರು ಗೇಟ್ ಮಾರ್ಗ ಖಾಸಗಿ ಬಸ್ ನಿಲ್ದಾಣ, ದಂಡೂರು ಬಾಗಿಲು ರಸ್ತೆ, ಹಳೇ ತಾಲೂಕು ಆಫೀಸ್ ರಸ್ತೆ, ಡೂಂಲೈಟ್ ಸರ್ಕಲ್ 4 ದಿಕ್ಕಿನ ಬಹುತೇಕ ಎಲ್ಲ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿ ಧೂಳು ರಸ್ತೆಗಳಾಗಿ ಸಂಚರಿಸಲು ಯೋಗ್ಯವಾಗಿಲ್ಲ. ವಾಹನಗಳ ಓಡಾಟದಿಂದ ಏಳುವ ಧೂಳು ಸೇವನೆಯಿಂದ ನಾಗರಿಕರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಸಲ ವಿವಿಧ ಸಂಘ, ಸಂಸ್ಥೆಗಳಡಿ ನಾಗರಿಕರು ಒಗ್ಗೂಡಿ ರಸ್ತೆ ದುರಸ್ಥಿ ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸದರೂ ಕೂಡ ರಸ್ತೆ ಪ್ರಯೋಜನವಾಗಿಲ್ಲ. ನಿತ್ಯ ಧೂಳು ಸೇವನೆ ತಪ್ಪಿಲ್ಲ ಎಂಬ ಕೊರಗು ನಾಗರಿಕರಲ್ಲಿ ಮನೆ ಮಾಡಿದೆ. ಈಗಲಾದರೂ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅತಿ ಶೀಘ್ರ ಇತ್ತ ಗಮನ ಹರಿಸಬೇಕಾಗಿದೆ.
ಸಾರ್ವಜನಿಕ ಶೌಚಾಲಯಗಳಿಲ್ಲದೆ ತೊಂದರೆ
ಮಧುಗಿರಿ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ತಾಲೂಕು ಕೇಂದ್ರಕ್ಕೆ ಬರುವ ಜನತೆ ಶೌಚಕ್ಕೆ ಬಯಲನ್ನೇ ಅವಲಂಬಿಸುವಂತಾಗಿದೆ.
ಮಧುಗಿರಿ ಉಪ ವಿಭಾಗ ಕೇಂದ್ರ, ಶೈಕ್ಷಣಿಕ ಜಿಲ್ಲೆ ಕೂಡ. ತಾಲೂಕು ಕಚೇರಿ, ಕೋರ್ಟ್, ಡಿಡಿಪಿಐ ಕಚೇರಿ, ಸರ್ಕಾರಿ ಕಾಲೇಜುಗಳು, ಎಸಿ ಕಚೇರಿ ಹೀಗೆ ಹತ್ತು ಹಲವು ಸರ್ಕಾರಿ ಕಚೇರಿಗಳು ಈ ಭಾಗದಲ್ಲಿವೆ. ಪ್ರತಿನಿತ್ಯ ಸಾವಿರಾರು ಜನರು ಕಚೇರಿಗಳ ಕೆಲಸಕ್ಕೆ ಬರುತ್ತಾರೆ. ಬಂದ ಜನತೆಗೆ ಸಾರ್ವಜನಿಕ ಶೌಚಾಲಯಗಳಿಲ್ಲದೆ ಪರದಾಡುವ ಜೊತೆಗೆ ಬಯಲೇ ಶೌಚಕ್ಕೆ ಅವಲಂಬಿತವಾಗಿದೆ.
ಮಧುಗಿರಿ ಖಾಸಗಿ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಬಂದು. ಹೋಗುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿನ ಪುರಸಭೆ ಉಚಿತ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಮಾಡದಿರುವುದು ವಿಪರ್ಯಾಸದ ಸಂಗತಿ. ಇಲ್ಲಿ ಹಣ ಪಾವತಿಸಿ ಬಳಸುವ ಶೌಚಾಲಯವಿದೆ. ಆದರೆ ಎಲ್ಲರ ಬಳಿ ಹಣವಿರಬೇಕಲ್ಲ. ಅದರಲ್ಲೂ ಇಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶೌಚಾಲಯವಿಲ್ಲದೆ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಪಟ್ಟಣದ ಯಾವುದೇ ಭಾಗದಲ್ಲೂ ಉಚಿತ ಶೌಚಗಳಿಲ್ಲದಿರುವ ಕಾರಣ ಆಳುವ ವ್ಯವಸ್ಥೆಯ ವಿರುದ್ಧ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.