ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲೆಯ ಸಹಕಾರಿಗಳಿಗೂ ಷೇರು ನೀಡಿ

Rashmi Kasaragodu
Updated On : 21 Jan 2014, 1:24 am

ಸಮ್ಮೇಳನದಲ್ಲಿ  ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಮನವಿ
ತುಮಕೂರನ್ನು ರಾಜ್ಯದ ಅಗ್ರ ಷೇರುದಾರ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಿ
ಕ.ಪ್ರ.ವಾರ್ತೆ   ತುಮಕೂರು   ಜ.20
ಜಿಲ್ಲೆಯ ಸಹಕಾರ ಸಂಸ್ಥೆಗಳು ಕೃಷಿಕ್ ಭಾರತಿ ಕೋ-ಅಪರೇಟಿವ್ (ಕ್ರಿಬ್ಕೋ)ನಲ್ಲಿ ಅತಿ ಹೆಚ್ಚು ಷೇರುಗಳನ್ನು ಹೂಡಲು ಸಿದ್ಧವಿದ್ದು ಅದಕ್ಕೆ ಕ್ರಿಬ್ಕೋ ಅವಕಾಶ ಕಲ್ಪಿಸಿಕೊಡುವ ಮೂಲಕ ರೈತರ ಅಭಿವೃದ್ಧಿಗೆ ಮುಂದಾಗುವಂತೆ ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಮನವಿ ಮಾಡಿದರು.
ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಹಕಾರಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಸುಮಾರು 232 ಸಹಕಾರಗಳಿದ್ದು ಎಲ್ಲವೂ ಕ್ರಿಬ್ಕೋನಲ್ಲಿ ಷೇರು ಹೂಡಲು ಸಿದ್ಧವಿದೆ. ಹಾಗಾಗಿ ತುಮಕೂರನ್ನು ರಾಜ್ಯದ ಅಗ್ರ ಷೇರುದಾರ ಜಿಲ್ಲೆಯನ್ನಾಗಿ ಮಾಡಲು ಕ್ರಿಬ್ಕೋ ಸಹಕರಿಸುವಂತೆ ಅವರು ಜಿಲ್ಲೆಯ ಸಹಕಾರಗಳ ಪರವಾಗಿ ಮನವಿ ಮಾಡಿದರು.
ಪ್ರಚಾರ ಅಗತ್ಯ: 1950-60 ರಲ್ಲಿ ನೈಸರ್ಗಿಕ ಗೊಬ್ಬರವನ್ನು ಬಳಸಿಕೊಂಡು ವ್ಯವಸಾಯ ಮಾಡಲಾಗುತ್ತಿದ್ದು ಕ್ರಮೇಣ ರಾಸಾಯನಿಕ ಗೊಬ್ಬರವನ್ನು ಬಳಸಿಕೊಂಡು ವ್ಯವಸಾಯ ಮಾಡಲು ರೈತರು ಮುಂದಾದರು. ರಾಸಾಯನಿಕ ಗೊಬ್ಬರ ಅಂದರೆ ಪ್ರಮುಖವಾಗಿ ಜಿಲ್ಲೆಯಲ್ಲಿ ಯೂರಿಯಾ ಹೆಚ್ಚು ಬಳಕೆಯಲ್ಲಿದೆ. ಈಗ ಅದರಲ್ಲೂ ಕೆಲವು ಆವಿಷ್ಕಾರಗಳನ್ನು ಮಾಡಿದ್ದು, ಪ್ರಸ್ತುತ ನೀಮ್ ಯೂರಿಯಾವನ್ನು ಹೆಚ್ಚು ಬಳಕೆ ಮಾಡಲಾಗುತ್ತಿದ್ದು ಈ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಹಾಗೂ ಪ್ರಚಾರ ಮಾಡಬೇಕಿದೆ ಎಂದು ಕೆ.ಎನ್. ರಾಜಣ್ಣ ತಿಳಿಸಿದರು.
ಕ್ರಿಬ್ಕೋ ಮಾರಾಟ ನಿರ್ದೇಶಕರಾದ ಎನ್. ಸಾಂಬಶಿವರಾವ್ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ, ಡಿಸಿಸಿ ಬ್ಯಾಂಕ್ ಡೆಪಾಸಿಟ್, ಲೋನ್ಗಳನ್ನು ನೀಡುವ ಮೂಲಕ ಜಿಲ್ಲೆಯ ಅನೇಕ ರೈತರಿಗೆ ಸಹಾಯ ಮಾಡುತ್ತಿದೆ. ಅದೇ ರೀತಿ ರೈತರಿಗೆ ಅವಶ್ಯಕವಾದ ಸೇವೆ ಹಾಗೂ ಸವಲತ್ತುಗಳನ್ನು ಕಲ್ಪಿಸಲು ಕ್ರಿಬ್ಕೋ ಸಂಪೂರ್ಣ ಸಿದ್ಧವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ಅಗತ್ಯವಾದ ಗೊಬ್ಬರವನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಸನ್ಮಾನ: ಇದೇ ವೇಳೆ ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಕ್ರಿಬ್ಕೋ ಮಾರಾಟ ನಿರ್ದೇಶಕರಾದ ಎನ್. ಸಾಂಬಶಿವರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನದಲ್ಲಿ ಸುಮಾರು 20 ವ್ಯವಸಾಯ ಸಹಕಾರ ಸಂಘಗಳಿಗೆ ಕ್ರಿಬ್ಕೋ ಷೇರುಗಳನ್ನು ಕೆ.ಎನ್. ರಾಜಣ್ಣ ಹಾಗೂ ಗಣ್ಯರು ವಿತರಿಸಿದರು.  ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್. ಗಂಗಣ್ಣ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಜಿ. ವೆಂಕಟೇಗೌಡ, ಕ್ರಿಬ್ಕೋ ಉಪಪ್ರಧಾನ ವ್ಯವಸ್ಥಾಪಕ ವಿ.ಎಸ್.ಆರ್. ಪ್ರಸಾದ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕ್ರಿಬ್ಕೋ ಆರ್ಜಿಬಿ ಪ್ರತಿನಿಧಿ ಜಿ.ಕೆ. ನಾರಾಯಣಸ್ವಾಮಿ, ಕ್ರಿಬ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಎಚ್.ಈ. ಮರಿಸ್ವಾಮಿ, ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಎಸ್.ಎಸ್. ಸಿದ್ದಪ್ಪಶೆಟ್ಟಿ, ಕ್ರಿಬ್ಕೋ ಹಿರಿಯ ವಲಯ ವ್ಯವಸ್ಥಾಪಕ ವಿ.ಎಸ್. ಸಾಲಿಮಠ, ಕ್ರಿಬ್ಕೋ ತುಮಕೂರು ಕ್ಷೇತ್ರಾಧಿಕಾರಿ ಎ.ಜಿ.ಬಾಬು ಮತ್ತಿತರರು ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement