ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೌಖಿಕ ಆದೇಶ, ಅತಿಥಿ ಶಿಕ್ಷಕರ ಪರದಾಟ

Rashmi Kasaragodu
Updated On : 21 Jan 2014, 1:26 am

ಕುಣಿಗಲ್: ತಾಲೂಕು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಮೌಖಿಕ ಆದೇಶಕ್ಕೆ ಅತಿಥಿ ಶಿಕ್ಷಕರು ಪರದಾಡುವಂತಾಗಿದ್ದು, ಮೌಖಿಕ ಆದೇಶ ಪಾಲಿಸದಿದ್ದರೆ ಕೆಲಸ ಕಳೆದುಕೊಳ್ಳುವ ಭೀತಿ ಒಂದೆಡೆಯಾದರೆ, ಪಾಲಿಸಿದರೆ ಗೌರವಧನ ಪಡೆಯಲು ಹರಸಾಹಸ ಪಡೆಯುವ ಸ್ಥಿತಿ ನಿರ್ಮಾಣವಾಗಿ ಅತ್ತದರಿ, ಇತ್ತ ಪುಲಿ ಕಥೆಯಾಗಿ ಬಹುತೇಕ ಅತಿಥಿ ಶಿಕ್ಷಕರು ಬಳಲುವಂತಾಗಿದೆ.
 ಡಾ.ನಂಜುಂಡಪ್ಪ ವರದಿಯ ಅನ್ವಯ ಕುಣಿಗಲ್ ಹಿಂದುಳಿದ ತಾಲೂಕಾಗಿದ್ದು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ತಾಲೂಕಿನಾದ್ಯಂತ ಇರುವ 423 ಸರ್ಕಾರಿ, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟಾರೆ 117 ಕಾಯಂ ಶಿಕ್ಷಕರು ಬೇಕಾಗಿದ್ದು, ಮಕ್ಕಳ ಕೊರತೆ ಸೇರಿದಂತೆ ಇತರೆ ಹೊಂದಾಣಿಕೆ ವ್ಯವಸ್ಥೆಯ ಮೇರೆಗೆ 78 ಶಿಕ್ಷಕರ ಕೊರತೆಯಾಗಿದೆ. ಈ ಕೊರತೆ ಶಿಕ್ಷಕರನ್ನು ಮಾಸಿಕ ಗೌರವಧನದ ಆಧಾರದ ಮೇಲೆ ಅತಿಥಿ ಶಿಕ್ಷಕರನ್ನಾಗಿ ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ಇಲಾಖೆ ನಿಗದಿಗೊಳಿಸಿರುವ ನಿಯಮಗಳ ಪ್ರಕಾರ ಯಾವ ಶಾಲೆಗೆ ಗೌರವ ಧನದ ಆಧಾರದ ಮೇಲೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆಯೊ ಅಲ್ಲಿಯೆ ಸೇವೆ ಸಲ್ಲಿಸಬೇಕು, ಹೊರತು ಅವರನ್ನು ಬೇರೆ ಶಾಲೆಗೆ ನಿಯೋಜಿಸುವುದು, ವರ್ಗಾಯಿಸುವುದು ಮಾಡುವಂತಿಲ್ಲ.
ಆರೋಪ: ಆದರೆ, ತಾಲೂಕು ಶಿಕ್ಷಣ ಇಲಾಖೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಅನುಷ್ಠಾನದ ಮೇಲುಸ್ತುವಾರಿಗೆ 33 ಸಿಆರ್ಪಿಗಳು, 3 ಪಿಆರ್ಪಿಗಳು, 3 ಇಸಿಒ, ಓರ್ವ ಬಿಆರ್ಸಿ, ಬಿಇಒ ಇಷ್ಟು ಮಂದಿ, ಸೂಕ್ತ ತರಬೇತಿಗಳ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತೇರ್ಗಡೆಹೊಂದಿ ನಿಯೋಜನೆ ಹೊಂದಿದ್ದಾರೆ. ಆದರೆ, ಇಷ್ಟು ಮಂದಿ ಇದ್ದರೂ ತಾಲೂಕಿನ ಬಹುತೇಕ ಕಡೆಗಳಲ್ಲಿ ಇಲಾಖಾ ಸುತ್ತೋಲೆಗಳು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ, ಕಡ್ಡಾಯ ಹಕ್ಕು ಶಿಕ್ಷಣದಡಿಯಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆಗಳ ಬಗ್ಗೆ ಇಲಾಖೆ ಹೊರಡಿಸುವ ಸುತ್ತೋಲೆಗಳ ಪಾಲನೆಯಾಗುತ್ತಿಲ್ಲವೆಂದು ಬಹುತೇಕ ನಾಗರಿಕರು, ಸಂಘ ಸಂಸ್ಥೆಗಳ ಅರೋಪವಾಗಿದೆ.
ಮನಬಂದಂತೆ: ಇದರ ಜೊತೆಯಲ್ಲಿ ಗೌರವಧನದ ಆಧಾರದ ಮೇಲೆ ಕಾಡುಬೋರನಹಳ್ಳಿ ಶಾಲೆಗೆ ನೇಮಕಗೊಂಡಿರುವ ಅತಿಥಿ ಶಿಕ್ಷಕರನ್ನು ಮೌಖಿಕ ಆದೇಶದ ಮೇರೆಗೆ ಅಣತಿಹಳ್ಳಿಗೆ ನಿಯೋಜಿಸಿ ಮತ್ತೆ ಕೆಲದಿನದ ನಂತರ ಕಂಪಲಾಪುರ ಗ್ರಾಮಕ್ಕೆ ಮನಬಂದಂತೆ ನಿಯೋಜನೆಗೊಳಿಸಿರುವ ಕಾರಣ ಇಂದು ಶಿಕ್ಷಕಿಯೊಬ್ಬರು ಕೆಲ ತಿಂಗಳ ಮಾಸಿಕ ಗೌರವಧನ ಬಿಡುಗಡೆಯಾಗದೆ, ಬಿಇಒ ಕಚೇರಿಗೆ ಅಲೆಯುವಂತಾಗಿದೆ. ಇನ್ನು ತಾಲೂಕಿನ ಗಾಣಮೇಸ್ತ್ರಿಪಾಳ್ಯದ ಕಿರಿಯ ಪ್ರಾಥಮಿಕ ಶಾಲೆಗೆ, ನೇಮಕಾತಿ ಅವಶ್ಯಕವಿಲ್ಲದಿದ್ದರೂ ನೇಮಿಸಿ ಮೂಗನಪುರಕ್ಕೆ,ನಿಯೋಜನೆಗೊಳಿಸಿದ್ದಾರೆ.ಯಲಗಲವಾಡಿ, ಕಲ್ಲಯ್ಯನ ಪಾಲ್ಯ, ಹೊಸೂರು ಸೇರಿದಂತೆ ವಿವಿಧೆಡೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅತಿಥಿ ಶಿಕ್ಷಕರ ನೇಮಕ ಮಾಡಿ, ಮನಬಂದಂತೆ ನಿಯೋಜನೆಗೊಳಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿನ ಮೌಖಿಕ ವರ್ಗಾವಣೆ ಆದೇಶದ ಕರಾಮತ್ತಿನ ಹಿಂದೆ, ರಾಜಕೀಯ ಒತ್ತಡ ಹಾಗೂ ಅಕ್ರಮದ ಅನುಮಾನಗಳು ವ್ಯಕ್ತವಾಗಿದ್ದು, ತಾಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ
ಬೋಧನೆಗೆ ಪದೇ, ಪದೇ ನಡೆಯುವ ಮೌಖಿಕ ವರ್ಗಾವಣೆ ಆದೇಶದಿಂದ ಧಕ್ಕೆಯಾಗಿ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗುವುದರಿಂದ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಮೌಖಿಕ ವರ್ಗಾವಣೆ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement