ಸಂಭಾಜಿ ಪಾಟೀಲ ಹೇಳಿಕೆ ಖಂಡನೆ
ಕ.ಪ್ರ.ವಾರ್ತೆ ಮಧುಗಿರಿ ಜ.20
ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕರ್ನಾಟಕದಲ್ಲಿ ನನ್ನ ಮೇಲೆ ಯಾರಾದರೂ ಹಲ್ಲೆ ನಡೆಸಿ ನಾನು ಸಾಯುವ ಪ್ರಸಂಗ ಬಂದರೆ ನನ್ನ ಜತೆ ನಾಲ್ವರ ಕನ್ನಡಿಗರ ಬಲಿ ಪಡೆದೇ ಸಾಯುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ಖಂಡಿಸಿ ಮಧುಗಿರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಟನೆ ನಡೆಸಿ ಉಪವಿಭಾಗಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ತಾ.ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ಮಾತನಾಡಿ, ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕನ್ನಡಿಗರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವುದು ಇದು ಮೊದಲೇನಲ್ಲ, 4 ಜನ ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವ ಯಾತ್ರೆ ಮಾಡುವುದಾಗಿ ಈ ಹಿಂದೆ ಆಘಾತಕಾರಿ ಹೇಳಿಕೆ ನೀಡಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಅದೇ ಸಂಭಾಜಿ ಪಾಟೀಲ ಮತ್ತೆ ಬೆಳಗಾವಿಯಲ್ಲಿ ನಾನು ಸಾಯುವ ಪ್ರಸಂಗ ಬಂದರೆ ನನ್ನ ಜೊತೆ ನಾಲ್ವರು ಕನ್ನಡಿಗರ ಬಲಿ ಪಡೆದೇ ಸಾಯುತ್ತೇನೆ ಎಂಬ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಚಂದನ್, ಕಾರ್ಯದರ್ಶಿ ಅಶ್ವತ್ಥನಾರಾಯಣ್, ಕನ್ನಡ ಸೇನೆ ಅಧ್ಯಕ್ಷ ಭಾಸ್ಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ. ಶ್ರೀನಿವಾಸಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಕಸಾಪ ಮಾಜಿ ಅಧ್ಯಕ್ಷ ಪ್ರೊ.ಮ.ಲ.ನ.ಮೂರ್ತಿ ಕಸಾಪ ಪದಾಧಿಕಾರಿಗಳು ಮತ್ತು ನೂರಾರು ಕನ್ನಡಪರ ಸಂಘಟನೆ ಕಾರ್ಯಕರ್ತರು ಇದ್ದರು.