ಜಗ್ಗೇಶ್ಗೆ ಟಿಕೆಟ್ ನೀಡಿ: ಮಲ್ಲಯ್ಯ
ಕೊರಟಗೆರೆ: ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ ಹಾಗೂ ಚಿತ್ರ ನಟ ಜಗ್ಗೇಶ್ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಅಖಿಲ ಕರ್ನಾಟಕ ಜಗ್ಗೇಶ್ ಅಭಿಮಾನಿಗಳ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಿ.ಎಲ್. ಮಲ್ಲಯ್ಯ ಒತ್ತಾಯಿಸಿದ್ದಾರೆ.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಗ್ಗೇಶ್ ಅವರು ಬಿಜೆಪಿಗೆ ಬಂದ ಮೇಲೆ ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದು ಸಂಘಟನೆಗೆ ಶ್ರಮವಹಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕ ರಾಜ್ಯ ರಸ್ತೆ ನಿಗಮದಲ್ಲಿ ಉಪಾಧ್ಯಕ್ಷರಾಗಿ ಉತ್ತಮ ಕೆಲಸ ನಿರ್ವಹಿಸಿ ಸಂಸ್ಥೆ ಆದಾಯ ಬರುವಂತೆ ಮಾಡಿ ಸಾವಿರಾರು ನಿರುದ್ಯೋಗಿಗಳಿಗೆ ಪಾರದರ್ಶಕತೆ ಅನುಸರಿಸಿ ಉದ್ಯೋಗ ಬರುವಂತೆ ಮಾಡಿದ್ದಾರೆ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಉತ್ತಮವಾದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣವನ್ನು ನಿರ್ಮಿಸುವಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದು ಗ್ರಾಮೀಣ ಸಾರಿಗೆಯನ್ನು ಹೆಚ್ಚಾಗಿ ನೀಡಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಅನುಕೂಲ ಮಾಡಿದ್ದಾರೆ ಎಂದರು.
ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ತರುವ ದೃಡ ಸಂಕಲ್ಪ ಮಾಡಿರುವ ಜಗ್ಗೇಶ್ ಅವರು ಬಡ ಕುಟುಂಬದಿಂದ ಬಂದಿದ್ದು ಪ್ರತಿಯೊಬ್ಬರ ಕಷ್ಟವನ್ನು ಅರಿತಿರುವ ಅವರು ಸಮಾಜದ ಏಳಿಗೆಗೆ ಅನೇಕ ಸಂಘ ಸಂಸ್ಥೆಗಳನ್ನು ಹಾಗೂ ಟ್ರಸ್ಟ್ಗಳನ್ನು ನಿರ್ಮಿಸಿ ಜನ ಸೇವೆ ಮಾಡುತ್ತಿದ್ದು ತಾಲೂಕು ಸೇರಿದಂತೆ ಅವರ ಸಂಘದಿಂದ ಬಡ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ತುರ್ತುವಾಹನ, ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರಗಳು ಸೇರಿದಂತೆ ಇನ್ನಿತರ ಜನೋಪಯೋಗಿ ಕೆಲಸಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಜಗ್ಗೇಶ್ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದು ಅವರಿಗೆ ಟಿಕೆಟ್ ನೀಡಬೇಕೆಂದರು.
ಪೋಷಕರ ದಿನಾಚರಣೆ
ತಿಪಟೂರು: ಪಟ್ಟಣದ ಅಕ್ಕಮಹಾದೇವಿ ಸಮಾಜದ ವತಿಯಿಂದ ಜಯದೇವ ವಿದ್ಯಾರ್ಥಿನಿಲಯದ ಸಭಾಂಗಣದಲ್ಲಿ ಶ್ರೀ ಅಕ್ಕಮಹಾದೇವಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಸಮಾಜದ ಅಧ್ಯಕ್ಷೆ ಸಿದ್ದಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಮುಕ್ತಾತಿಪ್ಪೇಶ್, ಶೋಭಾ ಮಂಜುನಾಥ್ ಮತ್ತಿತರರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ರೀತಿಯ ವೇಷ ಭೂಷಣ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅನುಪಮ ಶಾಲೆಯ ವಾರ್ಷಿಕ ವರದಿ ಓದಿದರು.