ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೆಮ್ಮದಿ ಪಡೆಯಬೇಕಾದರೆ ಆಧ್ಯಾತ್ಮ ಅಗತ್ಯ: ಷಡಕ್ಷರ ಶ್ರೀ

Rashmi Kasaragodu
Updated On : 22 Jan 2014, 1:35 am


ತಿಪಟೂರು: ಯೋಗ ಮತ್ತು ಜ್ಞಾನಗಳೆಂಬ ಎರಡು ದೀವಟಿಗೆಗಳನ್ನು ಹಿಡಿದು ಸಂಸರಾವೆಂಬ ಸಾಗರದಲ್ಲಿ ಸಾಗಿದರೆ ಮಾತ್ರ ಮುಕ್ತಿ ಪಡೆಯಲು ಸಾಧ್ಯ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು,
 ಪಟ್ಟಣದ ಷಡಕ್ಷರ ಮಠದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಇಂದಿನ ಪೀಳಿಗೆಯು ಆಸೆಗಳ ಕುದುರೆಯನ್ನೇರಿ ನಾಗಲೋಟದಲ್ಲಿ ಓಡುತ್ತಾ ತಮ್ಮ ಬದುಕಿನ ಗತಿಯನ್ನೇ ಬದಲಿಸಿಕೊಂಡು ಹಲವು ರೋಗಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಇವೆಲ್ಲವುಗಳಿಂದ ದೂರವಾಗಿ ನೆಮ್ಮದಿಯನ್ನು ಪಡೆಯಬೇಕಾದರೆ ಆಧ್ಯಾತ್ಮದ ಸಂಪರ್ಕ ಪಡೆಯಬೇಕೆಂದು ತಿಳಿಸಿದರು.
 ಎಸ್.ವಿ.ಪಿ ಕಾಲೇಜಿನ ಉಪನ್ಯಾಸಕ ಕೆ.ಎನ್.ರೇಣುಕಯ್ಯ ಉಪನ್ಯಾಸ ನೀಡಿ ಧರ್ಮ, ಸಂಸ್ಕೃತಿಗೆ ಹೆಸರಾದ ನಮ್ಮ ನಾಡು ಶಿವಶರಣರ ಸಂಗದಿಂದ ಸಂತೋಷಗೊಂಡಿತ್ತು. ಅವರ ಅರಿವಿನ ನುಡಿಗಳು ಆಧ್ಯಾತ್ಮಿಕ ಒಂದೊಂದು ಕಿರಣಗಳಾಗಿದ್ದವು. ಇಂದು ನಾವೆಲ್ಲ ವಚನಕಾರರ, ಶಿವಶರಣರುಗಳ ತತ್ವಾದರ್ಶ, ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಭಕ್ತಿಯೆಂಬ ಹೆದ್ದಾರಿಯಲ್ಲಿ ಸಾಗಿದರೆ ಮಾತ್ರ ಭವಿಷ್ಯದ ಬದುಕಿನಲ್ಲಿ ಪರಮಾನಂದದೊಂದಿಗೆ ಸದ್ಗತಿಯನ್ನು ಹೊಂದಬಹುದು. ಇಲ್ಲವಾದಲ್ಲಿ ನರಕದ ಹಾದಿಯಲ್ಲಿ ನರಳಬೇಕಾಗುತ್ತದೆ ಎಂದರು.
 ಶರಣರಾದ ಟಿ.ಎನ್.ಪರಮಶಿವಯ್ಯ ಉಪಸ್ಥಿತರಿದ್ದರು. ವೇದಾಂತಚಾರ್ ಮತ್ತು ಬಳಗದವರಿಂದ  ವಚನಗಾಯನ ನಡೆಸಲಾಯಿತು. ಶಿಕ್ಷಕ ಬಸವರಾಜು ನಿರೂಪಿಸಿ, ವಂದಿಸಿದರು.


'ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ'
ಹುಳಿಯಾರು: ಶಾಲಾ-ಕಾಲೇಜು ಹಂತದಲ್ಲಿ ಆಯೋಜಿಸುವಂತಹ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ತೋರ್ಪಡಿಸಬೇಕೆಂದು ಚಿ.ನಾ.ಹಳ್ಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ತಿಳಿಸಿದರು.  ಹುಳಿಯಾರು ಪಟ್ಟಣ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಬಾಲಕಿಯರ ಸ್ವತಂತ್ರ ಪದವಿ ಪೂರ್ವಕಾಲೇಜಿನ 2013-14ನೇ ಸಾಲೀನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖಂಡರಾದ ನಂದಿಹಳ್ಳಿ ಶಿವಣ್ಣ, ಪ್ರಾಚಾರ್ಯ ಸಿ.ಆರ್.ಕೃಷ್ಣಯ್ಯ ಮಾತನಾಡಿದರು. ಗೀತಾ ಶಾಲಾವರದಿಯನ್ನು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement