ವಿದ್ಯಾರ್ಥಿಗಳೇ ಉತ್ತಮ ಜೀವನ ರೂಪಿಸಿಕೊಳ್ಳಿ: ಜಯಚಂದ್ರ ಕರೆ
ತುಮಕೂರು: ವಿದ್ಯಾರ್ಥಿಗಳು ಹೆಚ್ಚೆಚ್ಚು ಶ್ರಮವಹಿಸಿ ಅಭ್ಯಾಸ ಮಾಡಿ ಹೆಚ್ಚು ಅಂಕಗಳನ್ನು ಗಳಿಸುವುದರೊಂದಿಗೆ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಚಿವ ಜಯಚಂದ್ರ ಕರೆ ನೀಡಿದರು.
ಅವರು ಶಿರಾದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ 2013-14 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಜಾನಪದ ವಿದ್ವಾಂಸ ಎಚ್.ವಿ. ವೀರಭದ್ರಯ್ಯ ಅವರು ಜನಪದ ಹಾಡುಗಳು ಮತ್ತು ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅರೇಹಳ್ಳಿ ರಮೇಶ್, ಎಸ್.ಎಂ. ಕೃಷ್ಣಯ್ಯ, ಹೊನ್ನೇಶ್, ಡಿ.ಸಿ. ಅಶೋಕ್, ಎಸ್.ಎಲ್. ರಂಗನಾಥ್, ನೂರುದ್ದೀನ್, ಕೆ.ಜಿ. ರಾಮಕೃಷ್ಣಪ್ಪ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ.ವಿ. ಜನಾರ್ದನಯ್ಯ ಮಾತನಾಡಿ ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಸಿಕೊಳ್ಳುವತ್ತ ಗಮನಹರಿಸಿ ಭವಿಷ್ಯವನ್ನು ಉಜ್ವಲಗೊಳಿಸಲು ಕರೆ ನೀಡಿದರು.
ಜಯರಾಮಯ್ಯ ನಿರೂಪಿಸಿದರು. ಜಿ. ಸ್ವಾಗತಿಸಿದರು. ರಾಘವೇಂದ್ರಚಾರ್ ಬಹುಮಾನ ವಿತರಿಸಿದರು. ವೇದಮೂರ್ತಿ ವಂದಿಸಿದರು.