ಸೂಲಗಿತ್ತಿ ನರಸಮ್ಮಗೆ ಅಭಿನಂದನೆ
ತುಮಕೂರು: ಜಾನಪದ ವಿಚಾರಗಳು ಗ್ರಾಮೀಣ ಜನರ ಬಹಳ ದೊಡ್ಡ ಆಸ್ತಿಯಾಗಿದೆ ಎಂದು ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಅಭಿಪ್ರಾಯಪಟ್ಟರು.
ಅವರು ಕೊರಟಗೆರೆ ತಾಲೂಕು ಸಂಕೇನಹಳ್ಳಿಯಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೂಲಗಿತ್ತಿ ನರಸಮ್ಮ ಅವರನ್ನು ಅಭಿನಂದಿಸಿ ಮಾತನಾಡಿದರು.
ಅಲೌಕಿಕ ಶಿಕ್ಷಣದ ವಿಶ್ವವಿದ್ಯಾನಿಲಯವಾಗಿ ಜನಪದ ಸಂಸ್ಕೃತಿಯಾಗಿದೆ. ಈ ಜನಪದ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಪದವಿಗಳ ಹಂಗಿಲ್ಲ. ಇದರಲ್ಲಿ ಕಲೆ, ವಿಜ್ಞಾನ, ಸಾಮಾಜಿಕ ವಿಜ್ಞಾನ, ವೈದ್ಯ, ಆರ್ಥಿಕತೆ ಎಲ್ಲವೂ ಅಡಗಿದೆ ಎಂದರು.
ನಾಗಮ್ಮ ಮತ್ತು ಸಂಗಡಿಗರು ಸೋಬಾನೆ ಗೀತೆ ಹಾಡಿದರು. ನರಸಿಂಹಮೂರ್ತಿ, ಹನುಮಂತರಾಯಪ್ಪ ತಂಡದಿಂದ ತಮಟೆ ವಾದ್ಯ, ಸಾವಿತ್ರಮ್ಮ ತಂಡದಿಂದ ಜನಪದ ಗೀತೆಗಳು, ಕೆಂಪನರಸಯ್ಯ ತಂಡದಿಂದ ದೇವರನಾಮಗಳ ಕಾರ್ಯಕ್ರಮ ನಡೆಯಿತು.
ಬಿಆರ್ಸಿ ಶಂಕರ್, ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್, ದಲಿತ ವಿಮೋಚನಾ ಸೇನೆಯ ಅಧ್ಯಕ್ಷ ರಾಮಾಂಜಿ, ಕೊಟ್ಟಶಂಕರ್, ನಾಗರಾಜು, ಮಂಜುನಾಥ್, ಜೆ.ಸಿ. ರಂಗಧಾಮಯ್ಯ, ಬಿ.ಜಿ. ಸಾಗರ್ ಇದ್ದರು.
ಭಾರತ ಪೋಲಿಯೊ ಮುಕ್ತ ರಾಷ್ಟ್ರ: ರವಿ
ತುಮಕೂರು: ಕೇವಲ ನಾಲ್ಕೈದು ವರ್ಷಗಳಲ್ಲಿ ಭಾರತ ಪೋಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದ ಪ್ರತಿಯೊಬ್ಬ ನಾಗರಿಕರೂ ಪೋಲಿಯೊ ನಿರ್ಮೂಲನೆಗೆ ತುಂಬಾ ಸಹಕಾರ ನೀಡಿ ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ ಎಂದು ಜೆಡಿಯು ಜಿಲ್ಲಾಧ್ಯಕ್ಷ ಕೆ.ಜಿ.ಎಲ್. ರವಿ ತಿಳಿಸಿದ್ದಾರೆ. ಅವರು ತುಮಕೂರು ನಗರದ 34ನೇ ವಾರ್ಡಿನ ಕ್ಯಾತ್ಸಂದ್ರದಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಕವಿತಾಕೃಷ್ಣ, ಜೆಡಿಯು ಮುಖಂಡರಾದ ಸಾಗರನಹಳ್ಳಿ ಪಂಚಾಕ್ಷರಯ್ಯ, ಮಲ್ಲೇಶ್ (ಮಠ) ಇತರರು ಭಾಗವಹಿಸಿದ್ದರು.