ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನ್ನಭಾಗ್ಯ ಅಕ್ಕಿ ತೊಳೆದ ನೀರು ಕುಡಿದು ಮೇಕೆಗಳ ಸಾವು

Rashmi Kasaragodu
Updated On : 23 Jan 2014, 2:04 am

ತುರುವೇಕೆರೆ: ಸರ್ಕಾರಿ ಪಡಿತರ ವಿತರಣಾ ಕೇಂದ್ರದಲ್ಲಿ ಅನ್ನಭಾಗ್ಯ ಯೋಜನೆಯಡಿ ಸರಬರಾಜು ಮಾಡಿರುವ ಅಕ್ಕಿಯಲ್ಲಿ ಗೊಬ್ಬರ ಮಿಶ್ರಣ ಮಾಡಿದ್ದು, ಸದರಿ ಅಕ್ಕಿಯನ್ನು ತೊಳೆದಿದ್ದ ನೀರನ್ನು ಕುಡಿದ 2 ಮೇಕೆಗಳು ಕ್ಷಣ ಮಾತ್ರದಲ್ಲೇ ಸಾವಿಗೀಡಾದ ಘಟನೆ ಸಮೀಪದ ಹುಲಿಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಪ್ಪ ಎಂಬವರಿಗೆ ನೀಡಲಾಗಿದ್ದ ಅಕ್ಕಿಯ ತುಂಬಾ ಕಸಕಶ್ಮಲಗಳಿದ್ದವು. ಪಡಿತರ ವಿತರಣಾ ಕೇಂದ್ರದಲ್ಲಿ ಇದನ್ನು ಕಂಡ ಮನೆಯಾಕೆ ಜಯಮ್ಮ ಅಕ್ಕಿಯ ಸ್ಥಿತಿಯನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅಂಗಡಿಯವರು ತಮಗೆ ಸರಬರಾಜು ಆಗಿರುವ ಅಕ್ಕಿಯೇ ಹೀಗಿದೆ. ಬೇಕಾದರೆ ತೆಗೆದುಕೊಂಡು ಹೋಗಿ ಇಲ್ಲದಿದ್ದರೆ ಬಿಡಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ವಿಧಿ ಇಲ್ಲದೆ ಪಡಿತರ ವಿತರಣಾ ಕೇಂದ್ರದಿಂದ ಅಕ್ಕಿಯನ್ನು ತೆಗೆದುಕೊಂಡು ಬಂದಿದ್ದ ಜಯಮ್ಮ ಮಂಗಳವಾರ ಮಧ್ಯಾಹ್ನ ಅಕ್ಕಿಯನ್ನು ಶುಚಿ ಮಾಡುವ ಸಲುವಾಗಿ ತೊಳೆದಿದ್ದಾರೆ. ಅಕ್ಕಿ ತೊಳೆದ ನೀರನ್ನು ಕುಡಿದ 2 ಮೇಕೆಗಳು ಕೆಲ ಕ್ಷಣದಲ್ಲೇ ಕುಸಿದು ಬಿದ್ದಿವೆ.
ಗಾಬರಿಗೊಂಡ ಮನೆಯಾಕೆ ಸಮೀಪದ ತಂಡಗದ ಪಶು ವೈದ್ಯರನ್ನು ಕರೆಸಿದ್ದಾರೆ. ಪಶು ವೈದ್ಯಾಧಿಕಾರಿ ಚಂದ್ರಯ್ಯ ಬಂದು ನೋಡುವಾಗಲೇ ಮೇಕೆಗಳು ಚಿಂತಾಜನಕ ಸ್ಥಿತಿ ತಲುಪಿ ಕೊನೆಯುಸಿರೆಳೆದವು.
ಇದು ಬಡವರಿಗೆ ನೀಡುವ ಅಕ್ಕಿ!: ಕೃಷ್ಣಪ್ಪ ಹಾಗೂ ಗೋವಿಂದಯ್ಯ ಎಂಬವರಿಗೆ ನೀಡಿರುವ ಅಕ್ಕಿಯನ್ನು ನೋಡಿದರೆ ಪ್ರಾಣಿಗಳೂ ತಿನ್ನಲು ಯೋಗ್ಯವಿಲ್ಲವೆಂಬುದು ಖಚಿತ. ಅಕ್ಕಿಗೆ ಸರಿಸಮವಾಗಿ ಜೇಡಿಮಣ್ಣು, ಕ್ಷಾರವಿರುವ ವಸ್ತು (ಬಹುಶಃ ಯೂರಿಯಾ ಅಥವಾ ಇತರೆ ಗೊಬ್ಬರ) ಬೆರೆಸಲಾಗಿದೆ. ಅಕ್ಕಿಯಲ್ಲಿ ಬಹುಪಾಲು ನುಚ್ಚು, ಮಣ್ಣಿನ ಹೆಂಟೆಗಳಿವೆ. ಇಂಥ ಅಕ್ಕಿಯನ್ನು ಜನರು ಬಳಸುವುದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. 1ಕ್ಕೆ ಅಕ್ಕಿ ನೀಡಿ ಸಾಧನೆ ಮಾತನಾಡುವ ಸರ್ಕಾರ ಕಳಪೆ ಗುಣಮಟ್ಟದ ಅಕ್ಕಿ ಸರಬರಾಜು ಮಾಡಿ ಜನರ ಜೀವಕ್ಕೆ ಆಪತ್ತು ತರುತ್ತಿದೆ. ಕಾಟಾಚಾರದ ಯೋಜನೆಗಳನ್ನು ಜಾರಿಗೆ ತಂದು ಜನರ ಜೀವದೊಂದಿಗೆ ಚೆಲ್ಲಾಟವಾಡುವುದು ತರವಲ್ಲ.


ಜೀವದೊಂದಿಗೆ ಚೆಲ್ಲಾಟ ಬೇಡ
ಮೇಕೆಗಳು ಮರಣ ಹೊಂದಿರುವುದರಿಂದ ಭಯಗೊಂಡಿರುವ ಅನ್ನಭಾಗ್ಯ ಫಲಾನುಭವಿಗಳು ವಿತರಣೆ ಮಾಡಿರುವ ಅಕ್ಕಿಯನ್ನು ಬಳಸಬೇಕೇ ಬೇಡವೇ ಎಂಬ ಆತಂಕದಲ್ಲಿದ್ದಾರೆ. ಕಲುಶಿತ ಅಕ್ಕಿಯನ್ನು ಕೂಡಲೇ ಹಿಂಪಡೆದು ಬೇರೆ ಅಕ್ಕಿ ವಿತರಣೆ ಮಾಡಬೇಕು. ಅಲ್ಲದೆ ಮೇಕೆಗಳನ್ನು ಕಳೆದು ಕೊಂಡಿರುವ ಕೃಷ್ಣಪ್ಪನ ಕುಟುಂಬಕ್ಕೆ 10 ಸಾವಿರ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಸೂಕ್ತ ಎಚ್ಚರಿಕೆ ವಹಿಸಿ ಸಾರ್ವಜನಿಕರಿಗೆ ಅಕ್ಕಿ ಸರಬರಾಜು ಮಾಡಬೇಕು ಎಂದು ನಿವೃತ್ತ ವಿದ್ಯಾಧಿಕಾರಿ ಚಂದ್ರಯ್ಯ, ಮುಖಂಡ ಚಂದ್ರೇಗೌಡ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement