ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೋಮುಗಲಭೆ ಆರೋಪಿಗಳ ಬಂಧಿಸಿ

Rashmi Kasaragodu
Updated On : 23 Jan 2014, 2:05 am

ಹುಳಿಯಾರು: ಪಟ್ಟಣದಲ್ಲಿ ಜ.15ರ ರಾತ್ರಿ ನಡೆದ ಅಹಿತಕರ ಘಟನೆ ಬಗ್ಗೆ ಆರಕ್ಷಕ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದೇ ಕೈಕಟ್ಟಿ ಕೂತಿದ್ದಾರೆಂದು ಹಾಗೂ ಹಿಂದೂ ಸಮಾಜದ ಕೆಲವು ಬೇಡಿಕೆಗಳನ್ನು ಆರಕ್ಷಕ ಇಲಾಖೆ ಮತ್ತು ಜಿಲ್ಲಾಡಳಿತ ಪರಿಗಣಿಸದೆ ಇರುವುದನ್ನು ಖಂಡಿಸಿ ಹೋಬಳಿ ಹಿಂದೂ ಹಿತರಕ್ಷಣಾ ವೇದಿಕೆಯವರು ಬುಧವಾರ ಪಟ್ಟಣದಾದ್ಯಂತ ಪ್ರತಿಭಟನಾ ಮೆರವಣಿಗೆಗೆ ನಡೆಸಿದರು. ಈ ಸಂದರ್ಭದಲ್ಲಿ ಅಂಗಡಿಮುಂಗಟ್ಟುಗಳು ಸ್ವಪ್ರೇರಣೆಯಿಂದ ಮುಚ್ಚಿ ಪ್ರತಿಭಟನೆಗೆ ಬೆಂಬಲಿಸಿದ್ದರಿಂದ ಪಟ್ಟಣದಾದ್ಯಂತ ಅಘೋಷಿತ್ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಮೆರವಣಿಗೆಗೂ ಮುನ್ನ ಗ್ರಾಮದೇವತೆ ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯವರು ಸಭೆ ಸೇರಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ, ಕಳೆದ ಜನವರಿ 15ರ ರಾತ್ರಿ ನಡೆದ ಅಹಿತಕರ ಘಟನೆಯಲ್ಲಿ ಒಂದು ಕೋಮಿಗೆ ಧಕ್ಕೆಯುಂಟಾಗಿದೆ. ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ, ಸರ್ಕಾರಿ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿ ಸಾರ್ವಜನಿಕ ಆಸ್ತಿಗೆ ಧಕ್ಕೆಯುಂಟುಮಾಡಿದ್ದಾರೆ. ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೋಮಿನವರ ಮೇಲಾಗಲಿ, ಗಲಭೆಗೆ ಪ್ರಚೋದನೆ ನೀಡಿದ ಮುಖಂಡರನ್ನಾಗಲೀ ಇದುವರೆಗೂ ಬಂಧಿಸದೆ ಪೊಲೀಸ್ ಹಾಗೂ ಜಿಲ್ಲಾಡಳಿತ ಮೌನ ವಹಿಸಿರುವುದನ್ನು ಖಂಡಿಸಿದರು.
ಹಿಂದೂ ಸಮುದಾಯದವರು ತಪ್ಪು ಮಾಡಿದರೆ ಯಾವುದೇ ಮುಲಾಜಿಲ್ಲದೆ ಬಂಧಿಸುವ ಪೊಲೀಸರು ಈಗ ಪೊಲೀಸ್ ಠಾಣೆ ಹಾಗೂ ಪೊಲೀಸ್ ಅಧಿಕಾರಿಯ ಮೇಲೆ ಕಲ್ಲು ತೂರಿರುವವರ ಬಗ್ಗೆ ಮಾಹಿತಿಯಿದ್ದರೂ ಇದುವರೆಗೂ ಅವರನ್ನು ಬಂಧಿಸಿ, ಕ್ರಮ ಕೈಗೊಳ್ಳದೇ ಕೈಕಟ್ಟಿ ಕೂತಿರುವುದೇಕೆ ಎಂದು ಪ್ರಶ್ನಿಸಿದರು. ಪ್ರಸ್ತುತ ಸರ್ಕಾರ ಮತ ಗಳಿಕೆಗಾಗಿ ಒಂದು ಕೋಮಿಗೆ ಒಂದು ರೀತಿ ನ್ಯಾಯ, ಮತ್ತೊಂದು ಕೋಮಿಗೆ ಮತ್ತೊಂದು ರೀತಿಗಳನ್ನು ಅನುಸರಿಸುತ್ತಾ ಮತದಾರರ ನಡುವೆ ವೈಷಮ್ಯ ಮನೋಭಾವ ಮೂಡುವಂತೆ ಮಾಡುತ್ತಿದೆ ಎಂದು ದೂರಿದರು.
ಪ್ರತಿಭಟನೆಯ ಮನ್ಸೂಚನೆ ಅರಿತ ವರ್ತಕರು ಹಾಗೂ ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಪಟ್ಟಣಾದಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬಸ್ ಸಂಚಾರ ವಿರಳವಾಗಿತ್ತು.
ಗ್ರಾಮದೇವತೆ ಶ್ರೀದುರ್ಗಮ್ಮದೇವಿ ದೇವಾಲಯದಿಂದ ಮೆರವಣಿಗೆ ಪ್ರಾರಂಭಗೊಂಡು ಪಟ್ಟಣದ ಬಸ್ ನಿಲ್ದಾಣ, ಗಾಂಧಿಪೇಟೆ, ರಾಂಗೋಪಾಲ್ ಸರ್ಕಲ್ ಹಾಗೂ ಬಿ.ಎಚ್.ರಸ್ತೆಯಲ್ಲಿ ಸಾಗಿ ನಾಡಕಚೇರಿಗೆ ತೆರಳಿ ತಹಸೀಲ್ದಾರ್ ಕಾಮಾಕ್ಷಮ್ಮ ಅವರಿಗೆ ಮನವಿಪತ್ರ ಸಲ್ಲಿಸಿದರು.
ತಾಪಂ ಅಧ್ಯಕ್ಷ ಕೆಂಕೆರೆ ನವೀನ್, ಹಿಂದೂ ಹಿತರಕ್ಷಣಾ ವೇದಿಯ ಬಡಗಿರಾಮಣ್ಣ, ಧನಂಜಯಮೂರ್ತಿ, ದಯಾನಂದ್, ಮರುಳಶೆಟ್ರು, ಎಲ್.ಆರ್.ಚಂದ್ರಶೇಖರ್, ಹು.ಕ.ವಿಶ್ವನಾಥ್, ಮೀಸೆರಂಗಪ್ಪ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement