ಪುರಸಭೆ ನಿರ್ಲಕ್ಷ್ಯ; ರಸ್ತೆಗೆ ಚರಂಡಿ ನೀರು
ಕುಣಿಗಲ್: ಪಟ್ಟಣದ ಹೃಯಭಾಗದಲ್ಲೇ ಚರಂಡಿ ಕಟ್ಟಿಕೊಂಡು, ಹಲವು ದಿನ ಕಳೆದರೂ ಪುರಸಭೆಯ ಕೃಪಾಕಟಾಕ್ಷ ಇತ್ತ ಬೀರದ್ದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆಯುವಂತಾಗಿದೆ.
ಚರಂಡಿ ಸ್ವಚ್ಛಗೊಳಿಸದ ಕಾರಣ, ಕೊಳಚೆ ನೀರು ರಸ್ತೆಯಲ್ಲೆಲ್ಲಾ ಹರಡಿ ದುರ್ನಾತ ಹರಡುತ್ತಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಹುಚ್ಚಮಾಸ್ತಿಗೌಡ ವೃತ್ತದಲ್ಲಿನ ಕಲ್ಲುಬಿಲ್ಡಿಂಗ್ ಮುಂಭಾಗದ ಮುಖ್ಯಚರಂಡಿಯನ್ನು ಕಳೆದ ಕೆಲ ದಿನಗಳಿಂದ ನಿರ್ವಹಣೆ ಮಾಡದ ಕಾರಣ, ಕೋಟೆ, ದೊಡ್ಡಪೇಟೆ ಸೇರಿದಂತೆ ಇತರೆಡೆಗಳಿಂದ ಬರುವ ಕೊಳಚೆ ನೀರು ಮುಖ್ಯರಸ್ತೆಯಲ್ಲೆಲ್ಲಾ ಹರಡಿದೆ. ಇದರಿಂದ ಈ ರಸ್ತೆಯ ಪಕ್ಕದ ಮಳಿಗೆ ಮಾಲೀಕರು ವಿಧಿ ಇಲ್ಲದೆ, ಬೇಗ ತಮ್ಮ ವಹಿವಾಟು ಮುಗಿಸುವಂತಾಗಿದೆ. ಪುರಸಭೆಯ ಅಯಕಟ್ಟಿನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ದಿನ ಬೆಳಗಾದರೆ, ಇದೇ ಮಾರ್ಗದಲ್ಲಿ ಒಡಾಡುತ್ತಿದ್ದರೂ ಕಂಡೂ ಕಾಣದಂತೆ ತೆರಳುತ್ತಿರುವುದು ನೋಡಿದರೆ ಅವರ ಕಾರ್ಯವೈಖುರಿ ಏನಂದು ತೋರುತ್ತದೆ. ನೈರ್ಮಲ್ಯ ನಿರ್ವಹಣೆಗೆ ಅಭಿಯಂತರರು, ಅರೋಗ್ಯ ನಿರೀಕ್ಷಕರು ಸೇರಿದಂತೆ ಸಾಕಷ್ಟು ಸಿಬ್ಬಂದಿಯಿದ್ದರೂ ಸಮರ್ಪಕ ಕಾರ್ಯ ನಿರ್ವಹಿಸುವಲ್ಲಿ ವಿಫಲರಾದ ಕಾರಣ ಜನತೆ ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರಾದ ರಂಗಸ್ವಾಮಿ, ಮಂಜುನಾಥ, ನಾಗರಾಜ್ ಇತರರು ಆಗ್ರಹಿಸಿದ್ದಾರೆ.