ರೈತರಿಂದ ದೂರು ಸಲ್ಲಿಕೆ
ಪಾವಗಡ: ಕಾರ್ಯದರ್ಶಿ ಮತ್ತು ರೈತರ ಮಧ್ಯೆ ಗಲಾಟೆ ನಡೆದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕಾರ್ಯದರ್ಶಿ ಕುಟುಂಬದವರ ವಿರುದ್ಧ ತಾ.ಗುಮ್ಮಘಟ್ಟ ಗ್ರಾಮದ ರೈತ ಮಲ್ಲಣ್ಣ ಎಂಬವರು ಮಂಗಳವಾರ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿರಪಸಮುದ್ರ ಹಾಗೂ ಚಿಕ್ಕಹಳ್ಳಿ ಗ್ರಾಪಂಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಗುಮ್ಮಘಟ್ಟ ಗ್ರಾಮದ ಇ.ಶಿವರಾಮ್ ಎಂಬವರು ಪಡಿತರ ಚೀಟಿ ಹಾಗೂ ಮನೆಗಳ ಹಂಚಿಕೆಗೆ ಸಂಬಂಧಪಟ್ಟಂತೆ ವಿರಪಸಮುದ್ರ ಗ್ರಾಪಂನಲ್ಲಿ ಭ್ರಷ್ಟಚಾರ ಎಸಗಿದ್ದಾರೆಂದು ಆರೋಪಿಸಿ ದಾಖಲೆ ಸಮೇತ ಗ್ರಾಪಂ ವ್ಯಾಪ್ತಿಯ ಕೆಲವರು ಕಳೆದ 10 ದಿನಗಳ ಹಿಂದೆ ತುಮಕೂರು ಜಿಪಂ ಸಿಇಒ, ತಾಪಂ ಇಒ ಅವರಿಗೆ ದೂರು ಸಲ್ಲಿಸಿದ್ದರು.
ಕಾರ್ಯದರ್ಶಿ ವಿರುದ್ಧ ಜಿಪಂಗೆ ನೀಡಿದ ದೂರಿಗೆ ನೀನು ಸಹಕರಿಸಿದ್ದಿ ಎಂದು ತೋಟದ ಬಳಿ ತೆರಳುತ್ತಿದ್ದ ಗ್ರಾಮದ ರೈತ ಮಲ್ಲಪ್ಪ ಎಂಬವರ ಮೇಲೆ ಕಾರ್ಯದರ್ಶಿ ಕುಟುಂಬದ ಕೆಲವರು ಮಾನಹೀನವಾಗಿ ಮಾತನಾಡಿ ಹಲ್ಲೆ ಮಾಡಿದ್ದಾರೆಂದು ಮಲ್ಲಣ್ಣ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಎಪಿಎಂಸಿ ನಿರ್ದೇಶಕ ಡಿ.ಎಂ.ವಿಶೇಶ್ವರಯ್ಯ ಮಾತನಾಡಿ, ವಿರಪಸಮುದ್ರ ಕಾರ್ಯದರ್ಶಿ ಭ್ರಷ್ಟಾಚಾರ ಹಾಗೂ ಗ್ರಾಪಂ ವ್ಯಾಪ್ತಿಯ ವಿವಿಧ ಯೋಜನೆಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡ ಗುಮ್ಮಘಟ್ಟ ಬಸವರಾಜ್ ಮಾತನಾಡಿ, ಕಾರ್ಯದರ್ಶಿ ಇ.ಶಿವರಾಮ್ ಸರ್ಕಾರಿ ಅಧಿಕಾರಿಯಾಗಿದ್ದು ಪಡಿತರ ಚೀಟಿ ಹೊಂದಿದ್ದಾರೆ. ಆಂಧ್ರದಲ್ಲಿ ವಾಸವಾಗಿದ್ದ ಕಾರ್ಯದರ್ಶಿಯ ಸಂಬಂಧಿಕರ ನಾಲ್ಕು ಕುಟುಂಬಗಳಿಗೆ ಗ್ರಾಪಂನಿಂದ ವಾಸ ಸ್ಥಳ ದೃಢೀಕರಣ ನೀಡಿ ಪಡಿತರ ಚೀಟಿಗಳು ಕಲ್ಪಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.