ಸಮಸ್ಯೆಗೆ ಸ್ಪಂದಿಸದ ಕಾರ್ಖಾನೆ; ತೀವ್ರಗೊಂಡ ನೌಕರರ ಮುಷ್ಕರ
ಬೇಡಿಕೆ ಈಡೇರಿಸಹೊರಟರೂ ಸಂದಿಸದ ಕಾರ್ಮಿಕರು; ಜಾನ್ಸನ್ ಕಾರ್ಖಾನೆ
ಕ.ಪ್ರ. ವಾರ್ತೆ ಕುಣಿಗಲ್ ಜ. 22
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ಮುಷ್ಕರ ನಡೆಸುತ್ತಿದ್ದ ಜಾನ್ಲನ್ ಕಾರ್ಖಾನೆಯ ನೌಕರರು, ಕಾರ್ಖಾನೆ ಆಡಳಿತ ಮಂಡಳಿ ನೌಕರರ ಸಮಸ್ಯೆಗೆ ಸ್ಪಂದಿಸುವುದು ಬಿಟ್ಟು ಪೊಲೀಸರ ಸಹಕಾರದಿಂದ ಮುಷ್ಕರ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿ ಮಂಗಳವಾರ ರಾತ್ರಿಯಿಂದ ಮುಷ್ಕರ ತೀವ್ರಗೊಳಿಸಿದ್ದಾರೆ.
ಪಟ್ಟಣದ ಅಂಚಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ, ಎಚ್ ಅಂಡ್ ಆರ್ ಜಾನ್ಸನ್ ಕಾರ್ಖಾನೆಯಲ್ಲಿ 104 ಕಾಯಂ ಮತ್ತು 250 ದಿನಗೂಲಿ ನೌಕರರಿದ್ದು, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಕಳೆದೊಂದು ತಿಂಗಳಿಂದಲೂ ಮುಷ್ಕರದಲ್ಲಿ ಪಾಲ್ಗೊಂಡ ಕಾರಣ, ಕಾರ್ಖಾನೆಆಡಳಿತ ಮಂಡಳಿ ಎರಡು ಘಟಕಗಳ ಪೈಕಿ ಒಂದರಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಕೆಲವರು ಮಾತ್ರ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಮುಷ್ಕರಕ್ಕೆ ಆಡಳಿತ ಮಂಡಳಿ ಸ್ಪಂದಿಸದ ಕಾರಣ, ಇನ್ನೊಂದು ಘಟಕದ ಕಾರ್ಮಿಕರೂ ಮುಷ್ಕರದಲ್ಲಿ ಪಾಲ್ಗೊಳುವಂತೆ, ಕಾರ್ಮಿಕ ಸಂಘದ ಪದಾಧಿಕಾರಿ ಕರೆ ನೀಡಿದರು.
ಹೀಗಾಗಿ ಅವರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ, ಆಡಳಿತ ಮಂಡಳಿ ಸದರಿ ಪದಾಧಿಕಾರಿಯನ್ನು ಅಮಾನತ್ತುಗೊಳಿಸಿ ಸೋಮವಾರ ಆದೇಶ ಮಾಡಿದೆ. ಕಾರ್ಮಿಕರು ಮಂಡಳಿಯ ಧೋರಣೆಯಿಂದ ಬೇಸತ್ತು ಮಂಗಳವಾರ ಎರಡನೇ ಪಾಳಿಯಲ್ಲಿ ಮುಷ್ಕರ ತೀವ್ರಗೊಳಿಸಲು ಮುಂದಾದಾಗ ಆಡಳಿತ ಮಂಡಳಿ, ಬೀಗಮುದ್ರೆ ಘೋಷಿಸುವ ಬೆದರಿಕೆ ಒಡ್ಡಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಜಟಾಪಟಿ ನಡೆದು ಮಂಗಳವಾರ ಪರಿಸ್ಥಿತಿ ಬಿಗುವಿನಿಂದ ಕೂಡಿದ ಕಾರಣ, ಪೊಲೀಸ್ ಅಧಿಕಾರಿಗಳಾದ ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ ತೆರಳಿ, ಪರಿಸ್ಥಿತಿ ತಿಳಿಗೊಳಿಸಲೆತ್ನಿಸಿದರು.
ಈ ಮಧ್ಯೆ ಮಂಗಳವಾರ ಎರಡನೇ ಪಾಳಿಗೆ ತೆರಳಿದ ಕಾರ್ಮಿಕರು ಬುಧವಾರ ಬೆಳಗ್ಗೆ ಕಾರ್ಖಾನೆ ಅವರಣದಲ್ಲೇ ಅಹಾರ ತ್ಯಜಿಸಿ ಧರಣಿಗೆ ಕುಳಿತಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಒಂದೆಡೆ ನೌಕರರು ಆಡಳಿತ ಮಂಡಳಿ ಮಾತುಕತೆಗೆ ಬರುತ್ತಿಲ್ಲ. ಪೊಲೀಸರನ್ನು ಬಳಸಿ ಮುಷ್ಕರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರೆ, ಆಡಳಿತ ಮಂಡಳಿ, ನೌಕರರ ಬೇಡಿಕೆಯನ್ನು ತೃಪ್ತಿದಾಯಕ ನಿಟ್ಟಿನಲ್ಲಿ ಈಡೇರಿಸಲು ಮುಂದಾದರೂ ಕಾರ್ಮಿಕರು ಸ್ಪಂದಿಸುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದೆ.