ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಂಗವಿಕಲತೆ ದೌರ್ಬಲ್ಯವಲ್ಲ: ಜಯಚಂದ್ರ

Rashmi Kasaragodu
Updated On : 24 Jan 2014, 2:18 am


ಶಿರಾ: ಅಂಗವಿಕಲತೆ ದೌರ್ಬಲ್ಯವಲ್ಲ. ಅನೇಕ ಅಂಗವಿಕಲರು ದೈಹಿಕವಾಗಿ ದುರ್ಬಲರಾಗಿದ್ದರೂ ಅವರಲ್ಲಿ ಸಮಾಜದಲ್ಲಿ ಪ್ರಾಮಾಣಿಕವಾಗಿ ದುಡಿದು ಸಂಪಾದನೆ ಮಾಡುವ ಗಟ್ಟಿತನವೂ ಇದೆ. ಅಂಗವಿಕಲರ ವಿದ್ವತ್ತನ್ನು ಬಳಸಿಕೊಳ್ಳುವ ತಾಳ್ಮೆ ಎಲ್ಲರಲ್ಲಿ ಇರಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಂಗವಿಕಲರ ರಾಷ್ಟ್ರೀಯ ಸಂಸ್ಥೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಅಂಗವಿಕಲರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಇಲ್ಲೀವರೆಗೆ ನಾವು ಸಲಕರಣೆ ನೀಡಿರುವುದು 2000ರಿಂದ 2500 ಜನರಿಗೆ ಮಾತ್ರ. ಇನ್ನೂ ಬಹಳಷ್ಟು ಜನರಿಗೆ ಸಲಕರಣೆಗಳು ತಲುಪಬೇಕಿದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ 76 ಲಕ್ಷ ಅಂದಾಜು ವೆಚ್ಚದಲ್ಲಿ ಸುಮಾರು 2000 ಅಂಗವಿಕಲರಿಗೆ ಸಲಕರಣೆಗಳನ್ನು ನೀಡಿದ್ದು, ಅದೇ ರೀತಿ ಸರ್ಕಾರದ ಅನುದಾನ ಬಳಸಿ ಮುಂದಿನ 2-3 ತಿಂಗಳಲ್ಲಿ ಪ್ರತಿ ತಾಲೂಕಿನಲ್ಲಿ ಒಂದೊಂದು ಶಿಬಿರ ಏರ್ಪಡಿಸಿ ಎಲ್ಲರಿಗೂ ಸಾಧನ ಸಲಕರಣೆ ವಿತರಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ ಮಾತನಾಡಿ, ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನಾವು ಅಂಗವಿಕಲರ ಬಗ್ಗೆ ಕರುಣೆ ತೋರಿಸುವ ಬದಲು ಅವರ ಆರ್ಥಿಕ ಸದೃಢತೆಗೆ ಮುಂದಾದಾಗ ಮಾತ್ರ ಅವರ ಕಷ್ಟ ನಿವಾರಿಸಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಸತ್ಯಮೂರ್ತಿ, ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಿಶಂಕರ್, ಪಂ. ದೀನದಯಾಳ್ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಜಿ.ಪಾಂಡ್ಯನ್, ಜಿಪಂ ಸದಸ್ಯರಾದ ಕೆಂಚಮಾರಯ್ಯ, ಅರೆಹಳ್ಳಿ ರಮೇಶ್, ಕೊಪ್ಪಳ್ ನಾಗರಾಜು, ಉಪವಿಭಾಗಾಧಿಕಾರಿ ತಬ್ಸಂ ಜಹೇರಾ, ತಾಪಂ ಉಪಾಧ್ಯಕ್ಷ ಉದಯಶಂಕರ್, ತಹಸೀಲ್ದಾರ್ ಚಂದ್ರಶೇಖರ್, ಸಿಡಿಪಿಒ ಸಿದ್ದಯ್ಯ, ನಗರಸಭಾ ಸದಸ್ಯರಾದ ಶಾರದಮ್ಮ, ಮಂಜುನಾಥ್, ಬಸವರಾಜು, ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಚಿತ್ತಯ್ಯ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement