ಅಂಬಿಗರ ಚೌಡಯ್ಯ ಜಯಂತಿ
ತುಮಕೂರು: ತುಮಕೂರಿನ ಬಸವಸೇನೆ ಕಚೇರಿಯಲ್ಲಿ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಬಸವಸೇನೆ ಅಧ್ಯಕ್ಷ ಪಿ. ಗಂಗರಾಜು ಮಾತನಾಡಿ, ಶರಣ ಅಂಬಿಗರ ಚೌಡಯ್ಯ ಕೆಳಜಾತಿಯಲ್ಲಿ ಹುಟ್ಟಿ, ಬಸವಣ್ಣನವರ ತತ್ವ-ಸಿದ್ಧಾಂತಕ್ಕೆ ಬದ್ಧನಾಗಿ, ವಚನಗಳನ್ನು ನಾಡಿಗೆ ಅರ್ಪಿಸಿದ ಶ್ರೇಷ್ಠ, ಮಹಾನ್ ಶಿವಶರಣ ಎಂದು ಶ್ಲಾಘಿಸಿದರು.
ಬಸವಸೇನೆ ಉಪಾಧ್ಯಕ್ಷ ರೋಟರಿ ಸದಾಶಿವಯ್ಯ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳ ಮುಖಾಂತರ, ವಚನಸಾಹಿತ್ಯ ಮೇಲ್ಮಟ್ಟಕ್ಕೇರಿದೆ. ಬಸವಣ್ಣನವರ ಶಿಷ್ಯನಾಗಿ ಅಂಬಿಗರ ಚೌಡಯ್ಯ ಶ್ರೇಷ್ಠ ವಚನಗಳನ್ನು ನಾಡಿಗೆ ನೀಡಿದ್ದಾರೆ ಎಂದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಅಂಬಿಗರ ಚೌಡಯ್ಯ ಹಿಂದುಳಿದ ವರ್ಗಕ್ಕೆ ಸೇರಿದ್ದು, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿ, ಶ್ರೇಷ್ಠ ಸಾಹಿತ್ಯ ರಚಿಸಿದ್ದು, ವಚನಗಳ ಮೂಲಕ ಹೊರ ಹೊಮ್ಮಿದ್ದು ಶ್ರೇಷ್ಠ ಸಾಧನೆಯೇ ಸರಿ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಸವಸೇನೆ ನಗರಾಧ್ಯಕ್ಷ ಪ್ರಕಾಶ್, ವಿನಯನ್ ಜೈನ್, ನಂದೀನಾಥ್, ಕಾರ್ಪೋರೇಟರ್ ಮಂಜುಳಾ ನಿರಂಜನ್, ಶೇಖರ್, ಕೀರ್ತಿ, ಶ್ರೀಧರ್ , ಭದ್ರಿ ಇದ್ದರು.