ಆದರ್ಶ ಪ್ರಜೆಗಳಾಗಲು ರಂಗಾಪುರ ಶ್ರೀ ಕರೆ
ತಿಪಟೂರು: ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಸನ್ನಡತೆ, ಗೌರವ ಸಂಪಾದನೆ ಮಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಗ್ರಾಮದ ಕಲ್ಲೇಶ್ವರ ನಗರದಿಂದ ಚಿಕ್ಕರಂಗಾಪುರ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಹಾಗೂ ಎಸ್ಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಸರ್ಕಾರ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಹಾಗೂ ಸೈಕಲ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ಬರಲು ಸೈಕಲ್ ಅವಶ್ಯಕ ಎಂದರು.
ತಹಶೀಲ್ದಾರ್ ಮಂಜುನಾಥ್, ಎಂಜಿನಿಯರ್ಗಳಾದ ನರೇಂದ್ರಪ್ಪ, ಚನ್ನಿಗರಾಯಪ್ಪ, ಜಗದೀಶಪ್ಪ, ನಟರಾಜು, ಜಿಪಂ ಸದಸ್ಯ ತ್ರಿಯಂಬಕ, ತಾಪಂ ಉಪಾಧ್ಯಕ್ಷ ಕೆ.ಎಸ್.ರಾಜು, ಗ್ರಾಪಂ ಅಧ್ಯಕ್ಷೆ ಅನುಸೂಯಮ್ಮ, ಎಸ್ಪಿಎಸ್ ಕಿರಿಯ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ಶಂಕರಪ್ಪ, ಆಡಳಿತಾಧಿಕಾರಿ ಎಸ್.ಎನ್.ಭದ್ರಪ್ಪ ಇದ್ದರು.
ಹಿರಿಯ ಶಿಕ್ಷಕ ಎಂ.ಬಿ.ಈಶ್ವರಪ್ಪ ಸ್ವಾಗತಿಸಿ, ಡಿ.ಎಚ್.ಗಂಗಣ್ಣ ನಿರೂಪಿಸಿದರು. ಶಿಕ್ಷಕ ಕೆ.ಎಂ.ಪರಮೇಶ್ವರಯ್ಯ ವಂದಿಸಿದರು.