ಗಾಯಕ ಹಳಿಬಂಡಿಗೆ ಭಾವಪೂರ್ಣ ಶ್ರದ್ಧಾಂಜಲಿ
ತುಮಕೂರು: ಯಶವಂತ ಹಳಿಬಂಡಿ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ನಕ್ಷತ್ರ ಒಂದು ಕಣ್ಮರೆಯಾಗಿದ್ದು, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ರೇಣುಕಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ವ್ಯಕ್ತಿತ್ವದ ಭಾವುಕ ಜೀವಿಯಾದ ಮಧುರ ಕಂಠದ ಹಳಿಬಂಡಿಯವರ ಸಾವು ಕನ್ನಡ ಸಂಗೀತಾಭಿಮಾನಿಗಳಿಗೆ ಆಘಾತವುಂಟು ಮಾಡಿದೆ ಎಂದರು.
ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿ ದಿನಪೂರ್ತಿ ವಿದ್ಯಾರ್ಥಿನಿ, ಉಪನ್ಯಾಸರೊಂದಿಗೆ ಕಾಲ ಕಳೆದಿದ್ದ ಶ್ರೀಯುತರು ತುಮಕೂರು ನಗರದಲ್ಲಿ ಗಾಯನ ತರಬೇತಿ ಶಿಬಿರ ಏರ್ಪಡಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದರು. ಇವರ ನಿಧನದ ವಾರ್ತೆ ನಮಗೆಲ್ಲಾ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದರು. ಉಪನ್ಯಾಸಕ ರಾಮದಾಸ್ ಮಾತನಾಡಿ, ಬೇಂದ್ರೆಯವರ ಭಾವನೆಗಳ ಬೆಳಕಾಗಿ ಧ್ವನಿಸುರುಳಿಯ ರೂಪವಾಗಿದ್ದ ಯಶವಂತ ಹಳಿಬಂಡಿಯವರ ಸುಗಮ ಸಂಗೀತ ಸಾಧನೆಯ ಗುಣಗಾನ ಮಾಡಿದರು.
ವೈ.ಎನ್.ದಾಕ್ಷಾಯಣಮ್ಮನವರು ಭಗವಂತನು ಮೃತರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದರು. ಎರಡು ನಿಮಿಷ ಮೌನ ಆಚರಿಸುವ ಮೂಲಕ ಹಳಿಬಂಡಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.