ಚೆಕ್ಡ್ಯಾಂ ಕಾಮಗಾರಿ ಕಳಪೆ ಆರೋಪ
ಪಾವಗಡ: ಪ್ರಸಕ್ತ ಸಾಲಿನಲ್ಲಿ ತಾ.ಜಲಾನಯನ ಇಲಾಖೆ ವತಿಯಿಂದ ನಿರ್ಮಿಸಿದ್ದ 4.5 ಲಕ್ಷ ವೆಚ್ಚದ ಕಾಮಗಾರಿ ಸಂಪೂರ್ಣ ನಾಶವಾಗಿದೆ ಎಂದು ತಾ.ಜೆಡಿಎಸ್ ಹಿರಿಯ ಮುಖಂಡ ಜಿ.ಬಿ.ದೇವರಾಜ್ ಆರೋಪಿಸಿದ್ದಾರೆ.
ರೈತರ ಕೊಳವೆ ಬಾವಿಗಳಿಗೆ ತಂಪಾಗುವ ಹಿನ್ನೆಲೆಯಲ್ಲಿ ತಾ.ಜಲಾನಯನ ಇಲಾಖೆ ವತಿಯಿಂದ 2013, 14ನೇ ಸಾಲಿಗೆ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ಜೆ.ಅಚ್ಚಮ್ಮನಹಳ್ಳಿ ಗ್ರಾಮ ಸರ್ವೆ ನಂಬರ್ 139ರ ಹಳ್ಳವೊಂದಕ್ಕೆ 4.5 ಲಕ್ಷ ವೆಚ್ಚದ ಚೆಕ್ಡ್ಯಾಂ ನಿರ್ಮಿಸಿದ್ದರು. ನಿರ್ಮಿಸಿದ 6 ತಿಂಗಳ ಒಳಗೇ ಈ ಕಾಮಗಾರಿಯನ್ನು ಗ್ರಾಮದ ಕೆರೆ ಅಭಿವೃದ್ಧಿ ಸಂಘದ ಕೆಲವರು ಹಾಳು ಮಾಡಿದ್ದಾರೆಂದು ಅವರು ದೂರಿದ್ದಾರೆ.
ಇದರಿಂದ ಸರ್ಕಾರದ ಅನುದಾನ ದುರುಪಯೋಗವಾಗಿದ್ದಲ್ಲದೆ ಅಂತರ್ಜಲ ಕುಸಿತವಾಗಿ ರೈತರ ಕೊಳವೆ ಬಾವಿಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜಲಾನಯನ ಇಲಾಖೆಯ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಪ್ಪ ಅವರ ಗಮನಕ್ಕೆ ಆನೇಕ ಬಾರಿ ತಂದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ತನಿಖೆ ಮಾಡಿ ಚೆಕ್ ಡ್ಯಾಂ ನಾಶಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಅವರು ಒತ್ತಾಯಿಸಿದ್ದಾರೆ. ರೈತರ ಕೊಳವೆ ಬಾವಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಶೀಘ್ರ ಸದರಿ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ರೈತರ ಪರವಾಗಿ ಮನವಿ ಮಾಡಿದ ಅವರು, ವಿಳಂಬ ಮಾಡಿದರೆ ಇಲಾಖೆ ಬಳಿ ತಾ. ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.