ಪದ್ಮಶ್ರೀ ಗುಬ್ಬಿ ವೀರಣ್ಣ ಟ್ರಸ್ಟ್ ರಚನೆ
ತುಮಕೂರು: ಪದ್ಮಶ್ರೀ ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ಅನ್ನು ಸರ್ಕಾರ ರಚಿಸಿದೆ. ಜಿಲ್ಲಾಧಿಕಾರಿಗಳು ಟ್ರಸ್ಟಿನ ಅಧ್ಯಕ್ಷರಾಗಿದ್ದು, ಡಾ. ಬಿ.ಜಯಶ್ರೀ, ಕುಮಾರ್ ಗುಬ್ಬಿವೀರಣ್ಣ, ಲಕ್ಷ್ಮಣ್ದಾಸ್ ಸದಸ್ಯರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದು ಬಿ. ಜಯಶ್ರೀ ತಿಳಿಸಿದರು.
ಡಾ. ಗುಬ್ಬಿ ವೀರಣ್ಣ ಅಭಿನಯಿಸಿದ ನಾಟಕಗಳನ್ನು ಪ್ರೋತ್ಸಾಹಿಸುವುದು, ಅವರ ಜೀವನ ರಂಗಭೂಮಿಗೆ ಸಂಬಂಧಿಸಿದ ಗ್ರಂಥಗಳನ್ನು ಪ್ರಕಟಿಸುವುದು, ಗುಬ್ಬಿ ವೀರಣ್ಣ ಕುರಿತಂತೆ ವ್ಯಾಸಂಗ ವಿಸ್ತರಣಾ ಶಾಖೆಗಳನ್ನು ವ್ಯವಸ್ಥೆಗೊಳಿಸುವುದು, ಟ್ರಸ್ಟ್ನ ಠೇವಣಿಯನ್ನು ಬ್ಯಾಂಕಿನಲ್ಲಿರಿಸಿ ಬರುವ ಬಡ್ಡಿಯಿಂದ ಚಟುವಟಿಕೆ ನಡೆಸುವುದು, ಡಾ. ಗುಬ್ಬಿ ವೀರಣ್ಣನವರ ನಾಟಕ ಅಭಿನಯ, ರಂಗಗೀತೆಗಳಿಗೆ ಪ್ರೋತ್ಸಾಹ ನೀಡುವುದು, ಡಾ. ಗುಬ್ಬಿ ವೀರಣ್ಣ ನಾಟಕಗಳಿಗೆಂದೇ ಮೀಸಲಾದ ಸರ್ಟಿಫಿಕೇಟ್ ಮತ್ತು ಡಿಗ್ರಿ ತರಗತಿಗಳನ್ನು ಆರಂಭಿಸುವುದು, ಡಾ. ಗುಬ್ಬಿ ವೀರಣ್ಣ ಜೀವನ ಮತ್ತು ರಂಗ ಚಟುವಟಿಕೆಗಳ ಆಶಯಕ್ಕೆ ಅನುಗುಣವಾಗಿ ಜನತೆಯಲ್ಲಿ ವೈಜ್ಞಾನಿಕ ದೃಷ್ಟಿ, ವೈಚಾರಿಕತೆ ಕುರಿತು ಜಾಗೃತಿ ಮೂಡಿಸುವುದು, ಟ್ರಸ್ಟ್ ಉನ್ನತ ಸಂಶೋಧನಾ ಕೇಂದ್ರವಾಗಿ ಬೆಳೆಯಲು ವಿ.ವಿ.ಗಳಿಂದ ಅಧಿಕೃತ ಮನ್ನಣೆ ಪಡೆಯುವುದು, ಟ್ರಸ್ಟ್ ಸಂಕೀರ್ಣವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಾಗೂ ಪ್ರವಾಸಿ ಕೇಂದ್ರವಾಗುವಂತೆ ಅಭಿವೃದ್ಧಿ ಹೊಂದಲು ಅಗತ್ಯ ಕ್ರಮ ಕೈಗೊಳ್ಳುವುದು ಈ ಟ್ರಸ್ಟಿನ ಪ್ರಮುಖ ಉದ್ದೇಶ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡಿ, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು, ಆಹಾರ ಪದಾರ್ಥಗಳನ್ನು ಮಾಧ್ಯಮಗಳು ಹೆಚ್ಚಿನ ಮಟ್ಟಿಗೆ ವೈಭವೀಕರಿಸಬೇಕು. ಹೆಚ್ಚು ಪ್ರಚಾರವಾದಂತೆ ಜಿಲ್ಲೆ ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತನೆಯಾಗಲಿದೆ. ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ಕುರಿತಂತೆ, ರಂಗಭೂಮಿ ಬಗ್ಗೆ ಹಾಗೂ ಗುಬ್ಬಿ ಪಟ್ಟಣದ ಚಾರಿತ್ರ್ಯಿಕ ಹಿನ್ನಲೆ ಕುರಿತಂತೆ ಹೆಚ್ಚು ಪ್ರಚಾರ ಕಾರ್ಯ ನಡೆಯಬೇಕಿದೆ ಎಂದರು.
ಗುಬ್ಬಿ ಪಟ್ಟಣದ ರಂಗಮಂದಿರ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮೂರು ಕಂತಿನಲ್ಲಿ 85 ಲಕ್ಷ ಬಿಡುಗಡೆ ಮಾಡಿದ್ದು, ಡಾ. ಬಿ.ಜಯಶ್ರೀ 25 ಲಕ್ಷ ನೀಡಿರುತ್ತಾರೆ. ಪಟ್ಟಣ ಪಂಚಾಯತಿ ಗುಬ್ಬಿ, ಎಸ್ಎಫ್ಸಿ ಅನ್ಟೈಡ್ ಗ್ರ್ಯಾಂಟ್ ಅಡಿ 18.96,161ನ್ನು ಪಡೆಯಲಾಗಿದ್ದು, ಮಾಜಿ ವಿದೇಶಾಂಗ ಸಚಿವರಾದ ಎಸ್.ಎಂ.ಕೃಷ್ಣ ಅವರು 10 ಲಕ್ಷ ನೀಡಿರುತ್ತಾರೆ. ಒಟ್ಟಾರೆ ರಂಗಮಂದಿರ ನಿರ್ಮಾಣಕ್ಕೆ ಈವರೆಗೆ 1,38,96,161 ಕೋಟಿ ಬಂದಿರುತ್ತದೆ. ರಂಗಮಂದಿರದ ಅಂದಾಜುವೆಚ್ಚ 3.25 ಕೋಟಿ ಇದ್ದು, ಹೆಚ್ಚುವರಿಯಾಗಿ 2 ಕೋಟಿಯಷ್ಟು ಅನುದಾನ ಕ್ರೋಢೀಕರಣವಾಗಬೇಕಿದೆ. ಇದಲ್ಲದೆ ಮಾರ್ಚ್ ಅಂತ್ಯದೊಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮತ್ತೆ 55 ಲಕ್ಷ ಬರುವ ನಿರೀಕ್ಷೆ ಇದ್ದು, ಹಣ ಲಭ್ಯವಾದ ಹಾಗೆ ಕಾಮಗಾರಿ ಪ್ರಗತಿ ಹೊಂದಲಿದೆ ಎಂದು ವಿವರಿಸಿದರು.