ಭಾರತದ ಉಳಿವಿಗಾಗಿ ಮೋದಿ ಗೆಲ್ಲಿಸಿ: ನಾಗೇಶ್
ಚಿಕ್ಕನಾಯಕನಹಳ್ಳಿ: ದೇಶದ ಉಳಿವಿಗಾಗಿ 2014ರ ಚುನಾವಣೆ ಬಹಳ ಮಹತ್ವದ್ದಾಗಿದೆ ಎಂದು ತಿಪಟೂರಿನ ಮಾಜಿ ಶಾಸಕ ಬಿ.ಸಿ.ನಾಗೇಶ್ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಬೂತ್ ಮಟ್ಟದ ಏಜೆಂಟ್-2 ಸಭೆಯನ್ನುದ್ದೇಶಿಸಿ ಮಾತನಾಡಿ, ಗುಜರಾತ್ ಅಭಿವೃದ್ದಿ ಹರಿಕಾರ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಗಟ್ಟುವುದು ವಿಚಿದ್ರಕಾರಕ ಶಕ್ತಿಗಳ ಹುನ್ನಾರವಾಗಿದೆ. ದಶಕಗಳ ಯುಪಿಎ-2 ಆಡಳಿತದಲ್ಲಿ ಮಿತಿ ಮೀರಿದ 10 ಲಕ್ಷ ಕೋಟಿಗಳ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಜನಸಾಮಾನ್ಯನನ್ನು ತಟ್ಟಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಅಡಿಗೆ ಅನಿಲ ಬೆಲೆಯೇರಿಕೆ. ವಾಜಪೇಯಿ ಕಾಲದಲ್ಲಿ ಕೇವಲ 250ಕ್ಕೆ ದೊರೆಯುತ್ತಿದ್ದ ಗ್ಯಾಸ್ ಇಂದು 1250 ಆಗಿದೆ. ದೇಶದ ಪ್ರಗತಿಯ ಸೂಚ್ಯಂಕ ಅಂದು 8.4ರಷ್ಟಿದ್ದುದು ಈಗ ಕೇವಲ ಶೇ.4 ರಷ್ಟಾಗಿದೆ. ಡಾಲರ್ ಎದುರು ರೂಪಾಯಿ ಮಂಡಿಯೂರಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಂದು ಪ್ರವಾಹ, ಬರಗಾಲ, ಕಾರ್ಗಿಲ್ ಯುದ್ದ, ಅಮೇರಿಕಾ ಆರ್ಥಿಕ ದಿಗ್ಬಂಧನವನ್ನೂ ಸಮರ್ಥವಾಗಿ ಎದುರಿಸಿದ ಭಾರತ ಇಂದು ವಿಶ್ವದ ಮುಂದೆ ಧರಾಶಾಯಿಯಾಗಿದೆ ಎಂದು ಆರೋಪಿಸಿದರು.
ಸೈನಿಕರ ಶಿರಶ್ಚೇಧನ ಪ್ರಕರಣವನ್ನು ಉಗ್ರವಾಗಿ ಖಂಡಿಸಲು ದಮ್ಮಿಲ್ಲದ ನಮ್ಮ ಗೃಹಮಂತ್ರಿ ಸದರಿ ಕೃತ್ಯವನ್ನು ಪಾಕ್ ಸೈನಿಕರ ವೇಷದ ಭಯೋತ್ಪಾದಕರ ಕೃತ್ಯವೆಂಬ ಹಸಿಸುಳ್ಳನ್ನು ಹೆಣೆಯುತ್ತಾರೆ. ನಮ್ಮನ್ನಿಂದು ದುರ್ಬಲ ನಾಯಕತ್ವ ಆಳುತ್ತಿದ್ದು, ಪ್ರಜೆಗಳಿಗೆ ರಕ್ಷಣೆಯೆಂಬುದು ಕನ್ನಡಿಯೊಳಗಿನ ಗಂಟಾಗಿದೆ. ದೇವಯಾನಿ ಪ್ರಕರಣದಲ್ಲಿ ಮೊದಲೆರಡು ದಿನ ವೀರಾವೇಷದ ಹೇಳಿಕೆ ನೀಡಿದ ಕೇಂದ್ರದ ಮಂತ್ರಿಗಳು ನಂತರ ನಿಶ್ಯಬ್ದವಾದರು. ಅಲ್ಪಸಂಖ್ಯಾತರ ಮತಗಳ ಮೇಲೆ ಅವಲಂಬಿತವಾಗಿರುವ ಕಾಂಗ್ರೆಸ್ ಮುಖ್ಯಮಂತ್ರಿ ಕುಖ್ಯಾತ ಭಯೋತ್ಪಾದಕ ಯಾಸಿನ್ ಭಟ್ಕಳ್ ಯಾರೆಂಬುದು ಗೊತ್ತಿಲ್ಲವೆಂದು ಎಲ್ಕೆಜಿ ಹುಡುಗರ ರೀತಿ ಹೇಳಿಕೆ ನೀಡುತ್ತಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ತಮ್ಮನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನೇತಾರರನ್ನು ಸಿಬಿಐ ಮೂಲಕ ಮಟ್ಟ ಹಾಕುವ ಪ್ರಕ್ರಿಯೆ ಯಾವುದೇ ನಾಚಿಕೆಯಿಲ್ಲದೆ ಕಾಂಗ್ರೆಸ್ ಜಾರಿಗೊಳಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಸೋತರೆ ಭಾರತವೇ ಸೋತಂತೆ ಎಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ಬಿ.ನಂದೀಶ್ ಮಾತನಾಡಿ, ಒನ್ ಬೂತ್ ಟೆನ್ ಯೂತ್ ಎಂಬ ಬಿಜೆಪಿ ಘೋಷಣೆಯನ್ನು ಚುನಾವಣಾ ಆಯೋಗ ಸ್ವಲ್ಪ ಬದಲಾವಣೆಯೊಂದಿಗೆ ಜಾರಿಗೊಳಿಸಿದೆ. ಚುನಾವಣೆಯಲ್ಲಿ ಬಿಎಲ್ಎ-2 ಇವರ ಜವಾಬ್ದಾರಿ ಹೆಚ್ಚಾಗಿದೆ. ಮತಪಟ್ಟಿಗಳಲ್ಲಿನ ಸೇರ್ಪಡೆ, ಕೈಬಿಡುವುದು, ನಕಲಿ ಮತಗಳ ರದ್ದು ಸೇರಿದಂತೆ ಮಹತ್ವದ ಕಾರ್ಯವನ್ನು ನೀವು ಮಾಡಬಹುದು. ಆದ್ದರಿಂದ ನಿಮ್ಮ ಪ್ರಾಮಾಣಿಕತೆಯ ಮೇಲೆ ಮುಂಬರುವ ಚುನಾವಣೆಯಲ್ಲಿ ನಮ್ಮ ಜಯದ ಭವಿಷ್ಯ ನಿರ್ಧಾವಾಗಲಿದೆ ಎಂದರು.
ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾಪಂ ಸದಸ್ಯ ಎಂ.ಎಂ.ಜಗದೀಶ್, ಲೀಗಲ್ ಷೆಲ್ ಅಧ್ಯಕ್ಷರಾದ ಎಂ.ವಿ.ಶಿವಾನಂದ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಗಂಗರಾಜು, ಮಹಿಳಾ ಮೋರ್ಚಾ ಮಾಲಾ, ಕಂಪಮ್ಮ, ನರಸಿಂಹಮೂರ್ತಿ, ಮಿಲ್ಟ್ರಿಶಿವಣ್ಣ ಇದ್ದರು.