ಒಗ್ಗಟ್ಟಾದ ಮೇಲೆ ಎಲ್ಲಿದೆ ಗೊಂದಲ: ಡಿವಿಎಸ್
ಕ.ಪ್ರ. ವಾರ್ತೆ ತುಮಕೂರು ಜ.24
ಬಿಜೆಪಿಯಲ್ಲೀಗ ಯಾವುದೇ ಗೊಂದಲ, ಭಿನ್ನಾಭಿಪ್ರಾಯವಿಲ್ಲ. ಯಡಿಯೂರಪ್ಪ ಬಿಜೆಪಿಗೆ ಬಂದ ಮೇಲೆ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಗೊಂದಲ ಇನ್ನೆಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ತಿಳಿಸಿದರು.
ಅವರು ತರೀಕೆರೆಗೆ ಹೋಗುವ ಮಾರ್ಗ ಮಧ್ಯೆ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ರಾಜ್ಯ ಮಟ್ಟದಲ್ಲಿ ಕೆಜೆಪಿ, ಬಿಜೆಪಿ ಜೊತೆ ವಿಲೀನವಾಗಿದೆ. ಜಿಲ್ಲಾ ಮಟ್ಟದಲ್ಲಿ ವಿಲೀನ ಪ್ರಕ್ರಿಯೆ ನಡೆದಿದೆ. ಯಡಿಯೂರಪ್ಪ ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರು ವಿಲೀನ ಪ್ರಕ್ರಿಯೆಯಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನಡೆದಿರುವ ತಮ್ಮ ಮತ್ತು ಮಾಜಿ ಉಪಮುಖ್ಯಮಂತ್ರಿ ಅಶೋಕ ನಡುವಿನ ಭಿನ್ನಾಭಿಪ್ರಾಯಕ್ಕೆ ಉತ್ತರಿಸಿದ ಸದಾನಂದಗೌಡ ನಾನು ಯಾವತ್ತೂ ಸ್ಥಾನಮಾನಕ್ಕೆ ಆಸೆ ಪಟ್ಟವನಲ್ಲ. ಪಕ್ಷ ತಮಗೆ ಎಲ್ಲವನ್ನೂ ಕೊಟ್ಟಿದೆ. ಈಗಲೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದಲ್ಲಿದ್ದೇನೆ. ಕ್ಯಾಬಿನೇಟ್ ಸ್ಥಾನಮಾನ ಕೂಡ ಇದೆ. ಪಕ್ಷ ಬಯಸಿದ್ದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಇಲ್ಲೇ ಕೊಡಿ, ಅಲ್ಲೇ ಕೊಡಿ ಅಂತಾ ಒತ್ತಾಯ ಮಾಡುವುದಿಲ್ಲ ಎಂದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬುದು ಅಂತಿಮವಾಗಿಲ್ಲ. 31 ನೇ ತಾರೀಖು ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಅಲ್ಲಿ ತೀರ್ಮಾನವಾಗಲಿದೆ. ಹಾಲಿ ಸಂಸದ ಜಿ.ಎಸ್. ಬಸವರಾಜ ಅವರಿಗೆ ಟಿಕೆಟ್ ನೀಡುತ್ತೀರ ಎಂಬ ಪ್ರಶ್ನೆಗೆ ಪಕ್ಷದ ಸಿದ್ದಾಂತ, ನಾಯಕತ್ವ ಒಪ್ಪಿ ಬರುವುದಾದರೆ ಬರಬಹುದು ಎಂದು ಮಾರ್ಮಿಕವಾಗಿ ನುಡಿದರು.
ಎತ್ತಿನಹೊಳೆ ಯೋಜನೆ ಜಾರಿಗೆ ಚಾಲನೆ ಕೊಟ್ಟಿದ್ದು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಬಳಿಕ ಇನ್ನಷ್ಟು ಹಣ ಮೀಸಲಿಟ್ಟರು. ಆದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎತ್ತಿನಹೊಳೆ ವಿಷಯದಲ್ಲಿ ಬಿಜೆಪಿ ಕಪಟ ನಾಟಕ ಆಡ್ತಾ ಇದೆ ಅಂತಾ ವಿನಾಕಾರಣ ಟೀಕಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಏಕೆಯೋಜನೆ ಜಾರಿ ಮಾಡಲಿಲ್ಲ ಎಂದರು.
ಯೋಜನೆಯ ಶಂಕುಸ್ಥಾಪನೆ ನೆರವೇರಬೇಕಾಗಿರುವುದು ಹಾಸನದ ಸಕಲೇಶಪುರದಲ್ಲಿ. ಆದರೆ ನಾವು ಕರೆದಿದ್ದ ಟೆಂಡರ್ ಅನ್ನೇ ಅನೂರ್ಜಿತಗೊಳಿಸಿರುವ ಕಾಂಗ್ರೆಸ್ ಸರ್ಕಾರ ಈಗ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳ 31 ರಂದು ಶಂಕುಸ್ಥಾಪನೆ ಏರ್ಪಡಿಸಿರುವುದು ಹಾಸ್ಯಾಸ್ಪದ ಎಂದರು.
ಸದಾನಂದಗೌಡರ ಜತೆ ಶಾಸಕ ಸಿ.ಟಿ. ರವಿ, ಜೀವರಾಜು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಸೊಗಡು ಶಿವಣ್ಣ ಇದ್ದರು.