'ಯೋಜನೆಗಳ ಬಗ್ಗೆ ಜನರಿಗೆ ಅರಿವು ಅಗತ್ಯ'
ಕನ್ನಡಪ್ರಭ ವಾರ್ತೆ ಗುಬ್ಬಿ ಜ.25
ಸರ್ಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಅರಿವು ಇಲ್ಲದ ಕಾರಣ ದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 60 ಕೋಟಿ ಜಾಬ್ಕಾರ್ಡ್ ನೋಂದಣಿಯಾಗಿದ್ದು ಕೇವಲ 2.5 ಕೋಟಿಯಷ್ಟು ಕಾರ್ಡ್ಗಳು ಮಾತ್ರ ನವೀಕರಣಗೊಂಡಿವೆ ಎಂದು ಬೆಂಗಳೂರು ಕಾರ್ಮಿಕ ವಿದ್ಯಾ ಮಂಡಳಿಯ ವಿದ್ಯಾಧಿಕಾರಿ ಎಂ.ಆರ್.ದೇಶಪಾಂಡೆ ತಿಳಿಸಿದರು.
ತಾಲೂಕಿನ ಸುರುಗೇನಹಳ್ಳಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಮಿಕ ವಿದ್ಯಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಯಾವುದೇ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜನಸಾಮಾನ್ಯರಿಗೆ ಆ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇರಬೇಕು. ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಖಾತ್ರಿ ಯೋಜನೆಯು ಮಹತ್ವಪೂರ್ಣವಾದದ್ದು. ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವತ್ತ ಗ್ರಾಮೀಣ ಜನತೆ ಪ್ರಾಮಾಣಿಕ ಯತ್ನ ಮಾಡಬೇಕೆಂದರು.
ಗ್ರಾಪಂ ಸದಸ್ಯ ಗಂಗಾಧರ್ ಮಾತನಾಡಿ, ತಾಲೂಕಿನ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಖಾತ್ರಿ ಯೋಜನೆಯಂತಹ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಜಾಗೃತಿ ಶಿಬಿರಗಳನ್ನು ನಡೆಸಲಾಗಿದೆ. ತಾಲೂಕಿನಲ್ಲಿ 8000 ಜಾಬ್ಕಾರ್ಡ್ಗಳು ನೋಂದಣಿಯಾಗಿದ್ದು ಕೇವಲ 800 ಜಾಬ್ಕಾರ್ಡ್ಗಳು ನವೀಕರಣಗೊಂಡಿವೆ. ಕಾರಣ ಫಲಾನುಭವಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ಇಲ್ಲದಿರುವುದೇ ಅಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ ವೆಂಕಟೇಶಯ್ಯ, ಸದಸ್ಯ ಕೃಷ್ಣಮೂರ್ತಿ, ಪ್ರತಿನಿಧಿ ಸಲ್ಮಾ, ನರಸೇಗೌಡ ಇದ್ದರು.