ಗೋಳು ಕೇಳದ ಕೈ ನಾಯಕರು
ತುಮಕೂರು: ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳು ಕಳೆದರೂ ಕಾಂಗ್ರೆಸ್ ಕಾರ್ಯಕರ್ತರ ಗೋಳು ಕೇಳುವವರಿಲ್ಲ. ಸಮಸ್ಯೆ ಆಲಿಸುವವರಿಲ್ಲ ಎಂದು ಪಾವಗಡದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವೆಂಕಟರಮಣಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ, ಸಮಸ್ಯೆ ಆಲಿಸುವ ಕೆಲಸ ನಡೆಯುತ್ತಿಲ್ಲ ಎಂದು ಸಚಿವರು, ಮುಖಂಡರನ್ನು ತರಾಟೆಗೆ ತೆಗೆದುಕೊಂಡ ವೆಂಕಟರಣಮಪ್ಪ, ಜಿಲ್ಲಾ ಕಾಂಗ್ರೆಸ್ (ಡಿಸಿಸಿ) ಅಧ್ಯಕ್ಷರಿಗೆ ಜವಾಬ್ದಾರಿಯಿದೆ. ಆದರೆ ಅದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಆಸಕ್ತಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಪುರುಸೊತ್ತಿಲ್ಲ. ಮನವರಿಕೆ ಮಾಡಿಕೊಡುವವರಿಲ್ಲ. 3-4 ತಿಂಗಳು ಕಳೆದರೂ ಒಂದು ಸಭೆ ನಡೆಸಿಲ್ಲ. ಹೀಗಾದರೆ ಹೇಗೆ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜನತೆಗೆ ತಿಳಿಸಿಕೊಡುವವರಿಲ್ಲ. ಕೇಂದ್ರ ಸರ್ಕಾರದ ಯೋಜನೆ, ಸಾಧನೆಗಳ ವಿವರ ನೀಡುವವರಿಲ್ಲ. ಪ್ರಚಾರ ಮಾಡುವವರಿಲ್ಲ. ಈಗಿರುವ ಭಿನ್ನಾಭಿಪ್ರಾಯ ಮರೆತು ಲೋಕಸಭಾ ಚುನಾವಣೆಯತ್ತ ಹೊಂದಾಣಿಕೆಯಿಂದ ಹೋಗುವಂತಾಗಲಿ. ಮುಖಂಡರು ಇತ್ತ ಗಮನಹರಿಸುವಂತಾಗಲಿ ಎಂದು ಎಂದು ಮಾರ್ಮಿಕವಾಗಿ ನುಡಿದರು.
ಕಷ್ಟ-ಸುಖ ವಿಚಾರಿಸಿ: ಮುಖಂಡರಿಗಿಂತ ಮೊದಲು ಕಾರ್ಯಕರ್ತರ ಕಷ್ಟ-ಸುಖ ವಿಚಾರಿಸುವಂತಾಗಲಿ. ಭಾಷಣಕ್ಕಿಂತ ಮುಖ್ಯವಾಗಿ ತಾಲೂಕುಗಳಿಂದ ಬಂದಿರುವ ಕಾರ್ಯಕರ್ತರ, ಮುಖಂಡರ ಸಮಸ್ಯೆ ಆಲಿಸಿ. ಯೋಗಕ್ಷೇವು ವಿಚಾರಿಸಿ ಎಂದು ಜಿಲ್ಲಾ ಉಸ್ತುವಾರಿ ಹೊತ್ತಿರುವ ಮುಖಂಡ ಬಿ.ಎಲ್. ಶಂಕರ್ ಅವರನ್ನುದ್ದೇಶಿಸಿ ಹೇಳಿದರು.
ಸಂಘಟನೆ ಉತ್ತಮವಾಗಿಲ್ಲ: ತಿಪಟೂರು ಶಾಸಕ ಷಡಕ್ಷರಿ ಮಾತನಾಡಿ, ಕಾಂಗ್ರೆಸ್ ಸಂಘಟನೆ ಹಾಗೂ ಲೋಕಸಭಾ ಚುನಾವಣೆಗೆ ತಯಾರಿ ಎರಡನ್ನೂ ಒಟ್ಟಿಗೆ ಮಾಡಬೇಕು. ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. 4 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದೇವೆ. ಹಾಗಂತ ಪಕ್ಷ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದರ್ಥವಲ್ಲ. ವೈಯಕ್ತಿತ ಹಿತಾಸಕ್ತಿ ಬದಿಗಿರಿಸಿ ಕೆಲಸ ಮಾಡಿ. ಕಳೆದ ಬಾರಿ ಯಡಿಯೂರಪ್ಪ ಅಲೆಯಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಆ ಅಲೆಯಿಲ್ಲ. ಬಿಜೆಪಿಗೆ ನೆಲೆಯಿಲ್ಲ. ಕಾಂಗ್ರೆಸ್ ಗೆಲವು ಸುಲಭವಾಗಿದೆ. ಆದರೆ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕಷ್ಟೆ. ನಾನು ಕೂಡ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೇ. ಹಾಗಂತ ಕೆಲ ಪತ್ರಿಕೆಗಳಲ್ಲೂ ಬಂದಿದೆ. ಯಾರಿಗೇ ಟಿಕಟ್ ಕೊಟ್ಟರೂ ಸರಿ ಅವರ ಪರ ಪ್ರಚಾರ ಮಾಡೊದು ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಕರ್ತವ್ಯವಾಗಬೇಕು ಎಂದರು.
ಸಮಸ್ಯೆ ಪರಿಗಣಿಸುತ್ತಿಲ್ಲ: ತುಮಕೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನೀರಿಲ್ಲ, ಚರಂಡಿ ಸಮಸ್ಯೆ ಬಗೆಹರಿದಿಲ್ಲ. ವಾರ್ಡ್ವಾರು ಸಮಸ್ಯೆಗಳನ್ನು ಮೊದಲು ಬಗೆಹರಿಸಿ. ಪ್ರಾಮಾಣಿಕ ಕಾರ್ಯಕರ್ತರನ್ನು ಪರಿಗಣಿಸುತ್ತಿಲ್ಲ. ಮೊದಲು ಕಾರ್ಯಕರ್ತರ ಮೇಲೆ ವಿಶ್ವಾಸವಿಡಿ. ಅಧಿಕಾರಿಗಳನ್ನು ಬೇಕಾದ್ರೆ ಸ್ವಲ್ಪ ಕಾಯಿಸಿ. ಆದರೆ ಕಾರ್ಯಕರ್ತರನ್ನು ಸತಾಯಿಸುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಬಿ.ಎಲ್. ಶಂಕರ್, ಮೇಯರ್ ಗೀತಾ ರುದ್ರೇಶ್, ಮಾಜಿ ಶಾಸಕ ಬೆಳ್ಳಾವಿ ಆರ್. ನಾರಾಯಣ್, ಸತೀಶ್ ಕೆ. ಮಲ್ಲಣ್ಣ, ಯಲಚವಾಡಿ ನಾಗರಾಜ್, ವಿಜಯಪ್ರಕಾಶ್ ಮಿರ್ಜಿ, ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್, ತಾಲೂಕು ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.