ಕಂದಾಯ ದಾಖಲೆ ನಿರ್ವಹಣೆ ಬಗ್ಗೆ ದೂರು ಸುರಿಮಳೆ
ಕುಣಿಗಲ್: ಪುರಸಭೆ ಆಡಳಿತಾಧಿಕಾರಿಗಳೂ ಆದ ತುಮಕೂರು ಉಪವಿಭಾಗಾಧಿಕಾರಿ, ಪುರಸಭೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಟ್ಟಣದ ಕಂದಾಯ ದಾಖಲೆಗಳ ನಿರ್ವಹಣೆ ಬಗ್ಗೆ ದೂರುಗಳ ಸುರಿಮಳೆಯಾಯಿತು.
ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಅನಂದ್, ತಾಲೂಕು ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿಗೆ ಹಲವು ಸಲಹೆ ಸೂಚನೆ ನೀಡಿದ ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದರು.
ಯೂಸರ್ಫಂಡ್, ಔಷಧಿ ನಿರ್ವಹಣೆ ಕುರಿತು ಪರಿಶೀಲಿಸಿ, ಕೆಲ ದಾಖಲೆಗಲನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು. ನಂತರ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದಾಗ, ಬಹುತೇಕರು ಕಂದಾಯ ಇಲಾಖೆಯಲ್ಲಿನ ಅಸಮರ್ಪಕ ದಾಖಲೆ ನಿರ್ವಹಣೆ ಬಗ್ಗೆ ಹಾಗೂ ಮನಬಂದಂತೆ ದಾಖಲೆ ನೀಡಿ ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವ ಬಗ್ಗೆ ವಿವರಿಸಿದರು.
ಅಕ್ರಮವಾಗಿ ಖಾತೆ: ಪುರಸಭೆ ಮಾಜಿ ಸದಸ್ಯ ಕೆ.ರಮೇಶ್, ಪಟ್ಟಣದ 13ನೇ ವಾರ್ಡ್ನಲ್ಲಿ ಸಾರ್ವಜನಿಕ ಪ್ರದೇಶವನ್ನು 1996ರ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ನಮೂದಿಸಿ, ಜಿಲ್ಲಾಧಿಕಾರಿ ಅಗತ್ಯ ಅನುಮತಿ ಪಡೆಯದೆ ಅಕ್ರಮವಾಗಿ ಖಾತೆ ಮಾಡಿದ್ದು, ನಂತರ ಈ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿರುವುದು ತಿಳಿದು ವಜಾ ಮಾಡಿದ್ದಾರೆ.
ಆದರೆ ಸದರಿ ಖಾತೆದಾರರು, ನ್ಯಾಯಾಲಯಕ್ಕೆ ಸಲ್ಲಿಸಲು ಖಾತಾ ನಕಲು ಸಲ್ಲಿಸಿದ್ದು, ಪ್ರಸತ್ಕ ಸಾಲಿಗೆ ಹೊಸದಾಖಲೆ ನೀಡುತ್ತಾ ಮನಬಂದಂತೆ ಕಂದಾಯ ದಾಖಲೆ ನಿರ್ವಹಿಸುತ್ತಿದ್ದಾರೆಂದು ದೂರಿದರು.
2ನೇ ವಾರ್ಡ್ನ ಬೋರೇಗೌಡ ಎಂಬುವರು ತಮ್ಮ ಹೆಸರಿನಲ್ಲಿದ್ದ ತಮ್ಮದೇ ಆಸ್ತಿಯನ್ನು, ತಮಗೆ ಗೊತ್ತಿಲ್ಲದಂತೆ ಮತ್ತೊಬ್ಬರಿಗೆ ಅಕ್ರಮವಾಗಿ ಖಾತೆ ಮಾಡಿ ತಮಗೆ ಅನ್ಯಾಯಮಾಡಿದ್ದಾರೆಂದು ದಾಖಲೆಗಳನ್ನು ಹಾಜರು ಪಡಿಸಿದರೆ, ಮೂರ್ತಿ ಎಂಬಾತ ವಾನಂಬಾಡಿ ಕಾಲೋನಿ ಪ್ರದೇಶದಲ್ಲಿ ಒಂದೇ ಖಾತೆ ಸಂಖ್ಯೆಯನ್ನು ಸುಮಾರು ಮೂವರಿಗೆ ದಾಖಲೆ ಮಾಡಿದ್ದಾರೆಂದು ದೂರಿದರು.
ಪರಿವರ್ತಿತ ಭೂಮಿಗೂ ಖಾತೆ: ಮುಖಂಡ ದಿನೇಶ್ ಪುರಸಭೆಯ ವ್ಯಾಪ್ತಿ ಮೀರಿ ಕಂದಾಯ ಗ್ರಾಮಗಳಿಗೆಲ್ಲಾ ಭೂ ಪರಿವರ್ತನೆ ಸೇರಿದಂತೆ ಅನುಮತಿ ನೀಡುತ್ತಾ, ಕಂದಾಯ ಗ್ರಾಮಗಳ ಪರಿವರ್ತಿತ ಭೂಮಿಗೂ ಖಾತೆ ಪ್ರಾರಂಭಿಸುತ್ತಾ, ಕಂದಾಯ ಇಲಾಖೆ ಮತ್ತು ಪುರಸಭೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಆರೋಪಿಸಿದರು.
ಇನ್ನು ಕೆಲವರು ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದಿರುವ ಬಗ್ಗೆ ದೂರಿದರು. ನಾಗರಿಕರ ಸಮಸ್ಯೆ ಆಲಿಸಿದ ಎಸಿ ಅನಂದ್, ಪುರಸಭೆ ಮುಖ್ಯಾಧಿಕಾರಿಗೆ ನಾಗರಿಕರೊಂದಿಗೆ ಗೌರವಯುತವಾಗಿ ನಡೆದುಕೊಂಡು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ, ಬಾಕಿ ಇರುವ ಕಂದಾಯ, ನೀರಿನ ತೆರಿಗೆ ವಸೂಲಾತಿಗೆ ನಾಗರಿಕರಲ್ಲಿ ಅರಿವು ಮೂಡಿಸಿ ವಸೂಲಿಗೆ ಕ್ರಮ ಕೈಗೊಂಡು, ಪುರಸಭೆಯ ಕೆಲಸ ಕಾರ್ಯಗಳಿಗೆ ಸಹಕಾರಿಯಾಗುವಂತೆ ಖಾಸಗಿ ಸಂಘ, ಸ್ತ್ರೀಶಕ್ತಿ ಸಂಘಗಳ ನೆರವು ಪಡೆಯುವಂತೆ, ವಿನಾಕಾರಣ ಕೆಲಸ ಕಾರ್ಯಗಳನ್ನು ನಿರ್ವಹಿಸದೆ ಅಸಡ್ಡೆ ತೋರಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಕಂದಾಯ ವಿಭಾಗದ ಯಾವುದೇ ದೂರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಹಶೀಲ್ದಾರ್ ಪುಟ್ಟನರಸಯ್ಯ, ಮುಖ್ಯಾಧಿಕಾರಿ ಅನ್ನದಾನಿ, ಪರಿಸರ ಅಭಿಯಂತರೆ ಶಿಲ್ಪ, ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ, ಕಂದಾಯ ನಿರೀಕ್ಷಕ ರಮೇಶ್, ಸಿಬ್ಬಂದಿ ರಮೇಶ, ಮಂಜುನಾಥ ಸದಸ್ಯ ಅರುಣಕುಮಾರ, ಮಂಜು, ರಂಗಸ್ವಾಮಿ, ಚಂದ್ರಶೇಖರ, ಶಂಕರ, ಸತೀಶ ಇತರರು ಉಪಸ್ಥಿತರಿದ್ದರು.