ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನ್ಯಾಯಾಂಗ ಕ್ರಿಯಾಶೀಲತೆ ಶ್ಲಾಘನೀಯ

Rashmi Kasaragodu
Updated On : 27 Jan 2014, 1:35 am

ಕನ್ನಡಪ್ರಭ ವಾರ್ತೆ, ತುಮಕೂರು, ಜ.26
ನ್ಯಾಯಾಂಗ ಕ್ರಿಯಾಶೀಲತೆಯನ್ನು ಕಾನೂನು, ಸಂಸದಿಯ, ನ್ಯಾಯ ಹಾಗೂ ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಪ್ರಶಂಶಿಸಿದ್ದಾರೆ. ಅವರು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಏರ್ಪಾಟಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂದೇಶ ನೀಡಿದರು.
ಸಂವಿಧಾನಕ್ಕೆ ಅಪಚಾರವಾಗುವ, ಉಲ್ಲಂಘನೆಯ ಸಂದರ್ಭದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುವುದರ ಮೂಲಕ ಪ್ರಜಾಪ್ರಭುತ್ವ ಬುನಾದಿಯನ್ನು ಭದ್ರಗೊಳಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು, ಅವರ್ಣನೀಯ ಎಂದು ಜಯಚಂದ್ರ ಶ್ಲಾಘಿಸಿದ್ದಾರೆ.
ಹಲವು ಸಮಸ್ಯೆ: ಸ್ವತಂತ್ರ ಭಾರತವು ನಿರಂತರವಾಗಿ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕ ಅಸಮಾನತೆ, ಜಾತಿ ಪದ್ದತಿ, ವರ್ಗ ಬೇಧ, ಭಾಷಾ ವೈವಿಧ್ಯತೆ, ವಿಭಿನ್ನ ಸಂಸ್ಕೃತಿ, ವಿವಿಧ ಆಚಾರ-ವಿಚಾರಗಳು ಭಾರತೀಯರನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಕಾಯ್ದುಕೊಳ್ಳಲು ಕಠಿಣ ಸವಾಲುಗಳಾಗಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನೂ ರೂಪಿಸಿ, ಒಕ್ಕೂಟ ವ್ಯವಸ್ಥೆಯೊಂದಿಗೆ ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಸಂವಿಧಾನದ ಆಶಯವಾಗಿದೆ. ಇಂತಹ ಮಹಾನ್ ಆಶಯವನ್ನು ಹೊಂದಿರುವ ಸಂವಿಧಾನವನ್ನು ರೂಪಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅತ್ಯಂತ ಸ್ಮರಣೀಯರು ಎಂದು ಶ್ಲಾಘಿಸಿದರು.
ಹೆಗ್ಗಳಿಕೆ ವಿಷಯ: ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ  ಭಾಷೆ, ಆಚಾರ-ವಿಚಾರ ಸೇರಿದಂತೆ ಎಷ್ಟೆಲ್ಲಾ ವೈವಿಧ್ಯತೆಗಳಿದ್ದರೂ ಸಮಗ್ರತೆ ಕಾಯ್ದುಕೊಂಡಿರುವುದು ಹೆಗ್ಗಳಿಕೆಯ ವಿಷಯ. ಶ್ರೀ ಸಾಮಾನ್ಯನಿಗೂ, ಶ್ರೀಮಂತನಿಗೂ ಸರಿ ಸಮಾನವಾದ ಹಕ್ಕುಗಳು ದೊರೆಯುವಂತೆ ಸಂವಿಧಾನ ವ್ಯವಸ್ಥೆ ರೂಪಿಸಲಾಗಿದೆ. ಪುರಾತನ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಸಭಾ ಮತ್ತು ಸಮಿತಿಗಳೆಂಬ ಆಡಳಿತ ವ್ಯವಸ್ಥೆಯ ಪ್ರಕಾರಗಳು ಇಂದಿನ ಸ್ಥಳೀಯ ಆಡಳಿತ
ವ್ಯವಸ್ಥೆಯ ಪರಿಕಲ್ಪನೆಗೆ ಕಾರಣವಾಗಿದೆ. ನಮ್ಮ ಇಂದಿನ ಆಡಳಿತ ವ್ಯವಸ್ಥೆಯು ಕಲ್ಯಾಣ ರಾಜ್ಯವನ್ನು ರೂಪಿಸುವ ಆಶಯವನ್ನು ಹೊಂದಿದೆ. ಸಮಾಜದಲ್ಲಿನ ವರ್ಗ, ಜಾತಿ ವ್ಯವಸ್ಥೆಯನ್ನು ಮತ್ತು ಆರ್ಥಿಕ ಅಸಮಾನತೆಯನ್ನು ನಿವಾರಣೆ ಮಾಡಿ, ವ್ಯವಸ್ಥಿತ ಸಮಾಜವನ್ನು ರೂಪಿಸುವ ಬೃಹತ್ ಸವಾಲು ನಮ್ಮ ಮುಂದಿದೆ.  ಪ್ರಜಾಪ್ರಭುತ್ವವನ್ನು ಭಾರತೀಯರು ವಿದೇಶಿಯರಿಂದ ಕಲಿಯಬೇಕಿಲ್ಲ. ಅದು ಪುರಾತನ ಕಾಲದಿಂದಲೂ ನಮ್ಮಲ್ಲೇ ಇತ್ತು. 12 ನೇ ಶತಮಾನದ ಬಸವಣ್ಣನವರು, ಅಲ್ಲಮಪ್ರಭುಗಳ ಅನುಭವ ಮಂಟಪ ಇದಕ್ಕೆ ಸಾಕ್ಷಿ.
ಕೃಷಿಗೆ ಹೆಚ್ಚಿನ ಆದ್ಯತೆ ಅಗತ್ಯ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಹೆಚ್ಚಿನ ಆದ್ಯತೆ ಅಗತ್ಯವಾಗಿದೆ. ಕೃಷಿ ವಲಯವನ್ನು ಬಲಿಷ್ಠಗೊಳಿಸುವುದು ಇಂದಿನ ಅಗತ್ಯವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಭೂತ ಪೂರ್ವ ಸಾಧನೆಯಾಗಿದೆ. ಕಾರ್ಮಿಕ ವರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಸುಶಿಕ್ಷಿತರನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಟೀಕೆ-ಟಿಪ್ಪಣಿಗೆ ಸ್ವಾಗತ: ನಮ್ಮ ಲೋಪದೋಷಗಳ ವಿಮರ್ಶೆಗೆ ಕಿವಿಗೊಡಬೇಕು. ಪ್ರಶಂಸೆಗೆ ಅಲ್ಲ ಎಂಬುದು ಮಹಾತ್ಮಗಾಂಧಿಯವರ ಪ್ರಸಿದ್ಧ ಹೇಳಿಕೆ. ಇದು ನಮಗೆಲ್ಲರಿಗೂ ಪಾಠ. ಆದ್ದರಿಂದ ಆಡಳಿತದಲ್ಲಿ ಯಾವುದಾದರೂ ಕುಂದು ಕೊರತೆಗಳಿದ್ದರೆ, ಅವುಗಳ ಬಗ್ಗೆ ಬರಬಹುದಾದ ಟೀಕೆ-ಟಿಪ್ಪಣಿಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಸರಿಪಡಿಸಿಕೊಳ್ಳುವ ಭರವಸೆಯನ್ನು ನೀಡುತ್ತೇನೆ. ನಾವೆಲ್ಲರೂ ಒಂದಾಗಿ ಸಶಕ್ತ ಮತ್ತು ಸಮೃದ್ಧ ಕರ್ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ಭೇದ ಮರೆತು, ಗಟ್ಟಿ ಹೆಜ್ಜೆಗಳನ್ನು ಇಡೋಣ ಎಂದು ಕರೆ ನೀಡಿದರು.
ತೆಂಗು, ಅಡಕೆ ಬೆಳೆಗಳು ಜಿಲ್ಲೆಯಲ್ಲಿ ಒಣಗಿದ್ದು ನಷ್ಟಕ್ಕೆ ಈಡಾಗಿವೆ. ಜಿಲ್ಲೆಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ. ಇದಕ್ಕೆ ಉಳಿದಿರುವ ಮಾರ್ಗ ಹೇಮಾವತಿ ನಾಲೆ ಅಗಲೀಕರಣ, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ಈಗಾಗಲೇ ಒತ್ತು ನೀಡಿದೆ ಎಂದರು.
ಜಿಲ್ಲಾಧಿಕಾರಿ ಸತ್ಯಮೂರ್ತಿ, ಎಸ್ಪಿ ರಮಣಗುಪ್ತ, ಎಎಸ್ಪಿ ಲಕ್ಷ್ಮಣ್, ಸಂಸದ ಜಿ.ಎಸ್. ಬಸವರಾಜು, ಶಾಸಕ ಡಾ. ರಫೀಕ್ ಅಹಮದ್, ಹುಲಿನಾಯ್ಕರ್, ಮೇಯರ್ ಗೀತಾ ರುದ್ರೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement