ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೂಲ ಮಾಲೀಕರಿಲ್ಲದೆ ದಾನಪತ್ರ

Rashmi Kasaragodu
Updated On : 27 Jan 2014, 1:34 am

ಕುಣಿಗಲ್: ಆಸ್ತಿ ದಾನಪತ್ರ ಸಮಯದಲ್ಲಿ ಮಾಲೀಕರಿಲ್ಲದೆ ಮತ್ತೊಬ್ಬರು ದಾನಪತ್ರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಉಪನೋಂದಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಎಡೆಯೂರು ಹೋಬಳಿಯ ಕಗ್ಗೆರೆ ಗ್ರಾಮದ ಸರ್ವೇ ನಂ 25ರಲ್ಲಿ ತಿಮ್ಮಮ್ಮ ಎಂಬುವವರಿಗೆ 1ಎಕರೆ 28 ಗುಂಟೆ ಜಾಗವಿದ್ದು, ಸದರಿ ಪ್ರದೇಶ ತಿಮ್ಮಮ್ಮನವರಿಗೆ ಅವರ ಪತಿ ನಿಧನರಾದ ಹಿನ್ನೆಲೆಯಲ್ಲಿ ಆ ಮೂಲಕ ಹಕ್ಕುಸ್ವಾಮ್ಯ ಬಂದಿತ್ತು.
 ಈ ಸಂಬಂಧ ಭೂ ದಾಖಲೆಗಳು ತಿಮ್ಮಮ್ಮನವರ ಹೆಸರಿನಲ್ಲೆ ಇತ್ತು. ಆದರೆ, ಕಳೆದ ನವೆಂಬರ್ನಲ್ಲಿ ಇವರ ಸಂಬಂಧಿಕರು ತಿಮ್ಮಮ್ಮನವರಿಗೆ ತಿಳಿಯದಂತೆ, ತಿಮ್ಮನವರ ಬದಲಾಗಿ ಮಾಯಮ್ಮ ಎಂಬಾಕೆಯನ್ನು ತಿಮ್ಮಮ್ಮ ಎಂದು ತೋರಿಸಿ, ಸದರಿ 1ಎಕರೆ 29 ಗುಂಟೆ ಪ್ರದೇಶದ ಜಮೀನನ್ನು ದಾನವಾಗಿ ಸಿದ್ದಯ್ಯ ಎಂಬಾತ, ಜಯರಾಮನ ಸಹಾಯದಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ಕಾರ್ಯಕ್ಕೆ ತಾಲೂಕು ಕಚೇರಿ ಮುಂಭಾಗದಲ್ಲಿ ಸ್ಟಾಂಪ್ವೆಂಡರ್ ಅಜಮತ್ ಉಲ್ಲಾ ಎಂಬಾತ ದಾಖಲೆಗಳನ್ನು ಸಿದ್ದಪಡಿಸಿ ನೀಡಿದ್ದರೆನ್ನಲಾಗಿದೆ.
ಅಸಲಿ ಮಾಲೀಕರಾದ ತಿಮ್ಮಮ್ಮನವರ ಬದಲಾಗಿ ಮಾಯಮ್ಮರನ್ನೇ ತಿಮ್ಮಮ್ಮನವರು ಎಂದು ಹೇಳಿ ದಾನಪತ್ರದ ನೋಂದಣಿ ಮಾಡಿಸಿದ್ದು, ನೋಂದಣಿ ಸಮಯದಲ್ಲಿ ಉಪನೋಂದಣಾಧಿಕಾರಿ, ದಾನ ಮಾಡುವವರು ಮತ್ತು ದಾನ ಪಡೆಯುವವರ ಸತ್ಯಾಸತ್ಯತೆ ಖಚಿತ ಪಡಿಸಿಕೊಳ್ಳಬೇಕಾದ್ದು ಇಲಾಖೆಯ ನಿಯಮ.
ಈ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಮತದಾರರ ಭಾವಚಿತ್ರದ ಗುರುತಿನ ಚೀಟಿ, ಆಧಾರಕಾರ್ಡ್ ಸೇರಿದಂತೆ ಇತರೆ ಭಾವಚಿತ್ರವಿರುವ ಅಗತ್ಯ ದಾಖಲೆಗಳನ್ನು ನೋಂದಣಿ ಸಮಯದಲ್ಲಿ ಕೂಲಂಕಶವಾಗಿ ಪರಿಶೀಲಿಸಿ ನೋಂದಣಿ ಮಾಡಬೇಕಾಗಿತ್ತು. ಆದರೆ, ಈ ನೋಂದಣಿ ಸಮಯದಲ್ಲಿ ಉಪನೋಂದಣಾಧಿಕಾರಗಳು ಇಲಾಖೆಯ ನಿಯಮಾವಳಿ ಪರಿಶೀಲಿಸದೆ ನೋಂದಣಿ ಮಾಡಿದ್ದರು.
ಈ ಸಂಗತಿ ಕಳೆದ ಡಿಸೆಂಬರ್ನಲ್ಲಿ ಆಸ್ತಿಯ ಅಸಲಿ ಮಾಲೀಕರಾದ ತಿಮ್ಮಮ್ಮನವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ತಿಮ್ಮಮ್ಮ ತಮ್ಮ ಆಸ್ತಿಯನ್ನು ಅವರಿಗೆ ಗೊತ್ತಿಲ್ಲದೆ, ಬೇರೊಬ್ಬರನ್ನು ಸೃಷ್ಟಿಸಿ, ದಾನಪತ್ರ ಮಾಡಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ, ದಾನಪತ್ರ ಪಡೆದ ಸಿದ್ದಯ್ಯ, ಇದಕ್ಕೆ ಸಹಕರಿಸಿದ ಮಾಯಮ್ಮ,ಜಯರಾಮ, ದಾಖಲೆ ಸಿದ್ದಪಡಿಸಿದ ಸ್ಟಾಂಪ್ ವೆಂಡರ್ ಅಜಮತ್ ಉಲ್ಲಾ ಮತ್ತು ಸರ್ಕಾರದ ಸುತ್ತೋಲೆ ಮತ್ತು ನಿಯಮಗಳನ್ನು ಪಾಲಿಸದೆ ನೋಂದಣಿ ಮಾಡಿದ ಕುಣಿಗಲ್ ಉಪನೋಂದಣಾಧಿಕಾರಿ ವಿರುದ್ಧ ಅಮೃತೂರು ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೃತೂರು ಪೊಲೀಸರು ಉಪನೋಂದಣಾಧಿಕಾರಿ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement