ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಹನ ಸವಾರರಿಗೆ ತೀರಾ ಕಿರಿಕಿರಿ

Rashmi Kasaragodu
Updated On : 27 Jan 2014, 1:35 am

ಕೊರಟಗೆರೆ ಪಟ್ಟಣದಿಂದ ಗೌರಿಬಿದನೂರು, ಮಧುಗಿರಿಗೆ ಸಂಪರ್ಕಿಸುವಂತಹ ರಸ್ತೆ ಕಾಮಗಾರಿ ಕಳೆದ ಎರಡು ವರ್ಷದಿಂದ  ಮಂದಗತಿಯಿಂದ ಸಾಗಿರುವುದರಿಂದ ಈ  ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀರಾ ಕಿರಿಕಿರಿಯಾಗಿದೆ.
ರಸ್ತೆಗೆ ಟಾರು ಬೀಳದೇ ಇರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನವೂ ಧೂಳೆಬ್ಬಿಸಿಕೊಂಡು ಹೋಗುವಂತಾಗಿದೆ. ದ್ವಿಚಕ್ರ ಹಾಗೂ ಪಾದಾಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಕೊರಟಗೆರೆ ಪಟ್ಟಣದ ಬಹುತೇಕ ಎಲ್ಲಾ ಕಚೇರಿಗಳನ್ನು ಸಂರ್ಪಕಿಸುವಂತಹ ರಸ್ತೆ ಇದೇ ಆಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ಕಾಮಗಾರಿ ಬೇಗ ಮುಗಿಸಿ, ಸವಾರರಿಗೆ ಆಗುವ, ಆಗುತ್ತಿರುವ ತೊಂದರೆಗಳ ಬಗ್ಗೆ ಸವಿಸ್ತಾರವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ವಿವರ ನೀಡಿದ್ದರೂ ಯಾಕೋ ರಸ್ತೆಗೆ ಟಾರು ಹಾಕಿಸುವ ಕೆಲಸದಲ್ಲಿ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇಲ್ಲ.
ಇದು ರಸ್ತೆಯ ಕಥೆಯಾದರೆ ಮತ್ತೊಂದು ಬದಿಯಲ್ಲಿ ತಂಗುದಾಣದ ಕಥೆ. ಪಟ್ಟಣದಲ್ಲಿ ಹಲವಾರು ವರ್ಷಗಳ ಹಿಂದೆ ತಂಗುದಾಣವನ್ನು ತೆರವುಗೊಳಿಸಿ ನಂತರ ಪಟ್ಟಣದಲ್ಲಿ ತಂಗುದಾಣ ನಿರ್ವಹಿಸದೆ ಇರುವುದರಿಂದ ಪ್ರಯಾಣಿಕರಿಗೆ ತಂಗುದಾಣವಿಲ್ಲದೆ, ಬಿಸಿಲು, ಮಳೆ, ಗಾಳಿಗೆ ಮೈಯ್ಯೊಡ್ಡಿ ನಿಲ್ಲುವಂತಹ ಸ್ಥಿತಿ ಬಂದಿದೆ. ಈಗಲಾದರೂ ಸಂಬಂಧಪಟ್ಟವರು ಗಮನಹರಿಸುವರೇ ಎಂಬ ನಿರೀಕ್ಷೆ ಜನರುದು.

ಪೇಟೆಯಲ್ಲೊಂದು ಹಂದಿ ತಾಣ...


ಕೊರಟಗೆರೆ ಪಟ್ಟಣದ ಹೃದಯ ಭಾಗದಂತಹ ದೊಟ್ಟಪೇಟೆಯ ರಸ್ತೆಯಲ್ಲಿ ಸೂಕ್ತವಾದ ಕಸ ವಿಲೇವಾರಿ ಮಾಡದೆ ಇರುವುದರಿಂದ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಎಲ್ಲಿ ನೋಡಿದರೂ ಕಸಗಳ ರಾಶಿ, ತ್ಯಾಜ್ಯಗಳು ಕೊಳತ ವಾಸನೆ ಬರುತ್ತಿರುವುದರಿಂದ ಈ ಭಾಗದಲ್ಲಿ ಜನ ಓಡಾಡಲು ಹರಸಾಹಸ ಪಡುವಂತಾಗಿದೆ. ಅಲ್ಲದೇ ಹಂದಿಗಳಿಗೆ ಈ ಜಾಗ ಆವಾಸಸ್ಥಾನವಾಗಿದೆ. ದಿನವಿಡೀ ಈ ಕಸದ ರಾಶಿ ಮೇಲೆ ಹಂದಿಗಳು ಉರುಳಾಡುತ್ತಿವೆ. ಈಗಾಗಲೇ ಜನ ಸಾಂಕ್ರಾಮಿಕ ರೋಗಗಳಿಂದ ಸಹ ಬಳಲುತ್ತಿದ್ದಾರೆ. ಕೊರಟಗೆರೆಯ ಬಹುತೇಕ ಎಲ್ಲಾ ಬೀದಿಗಳ ಕಥೆಯೂ ಇದೇ ಆಗಿದೆ. ಆದರೆ ದೊಡ್ಡ ಪೇಟೆ ರಸ್ತೆಯಲ್ಲಿ ಮಾತ್ರ ಕಸ ವಿಲೇವಾರಿ ಮಾಡದೆ ಹಲವಾರು ದಿವಸಗಳೇ ಆಗಿದೆ. ಈ ಸಂಬಂಧ ಹಲವಾರು ಭಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ. ಜನ ಮಾತ್ರ ಮೂಗು ಬಿಗಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಕಸ ವಿಲೇವಾರಿ ಮಾಡಿದರೆ ಅನುಕೂಲವಾದೀತು. ಇಲ್ಲದಿದ್ದರೆ ಇನ್ನಷ್ಟು ರೋಗಗಳಿಗೆ ಜನ ತುತ್ತಾಗಬೇಕಾಗುತ್ತದೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡುತ್ತಾರೆಯೇ? ಈ ಮಾರ್ಗದಲ್ಲಿ ಪ್ರತಿ ದಿನ ಓಡಾಡುವ ಜನರ ಪ್ರಶ್ನೆಯಾಗಿದೆ.

ಈ ಕೊಳಕನ್ನು ತೆಗೆಯುವವರು ಯಾರು?

ಇದು ಕೊರಟಗೆರೆ ಕಾಳಿದಾಸ ವಿದ್ಯಾವರ್ಧಕ ಕಾಲೇಜಿನ ಮುಂಭಾಗ ಇರುವ ಕೊಳಚೆಯ ದೊಡ್ಡಕಥೆ. ಕೊರಟಗೆರೆಯ ಕಾಳಿದಾಸ ವಿದ್ಯಾವರ್ಧಕ ಕಾಲೇಜು ಮುಂದೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ನೀರು ಕೆರೆಯಂತೆ ನಿಂತು ಬಿಟ್ಟಿದೆ.
ದಿನವಿಡೀ ಹಂದಿಗಳು, ಸೊಳ್ಳೆಗಳು, ನೊಣಗಳು ಮುಂತಾದ ಕ್ರಿಮಿ ಕೀಟಗಳು ಈ ಕೊಳಚೆ ಬಳಿ ದಾಂಗುಡಿ ಇಡುತ್ತದೆ. ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಈ ಶಾಲೆಗೆ ವ್ಯಾಸಂಗ ಮಾಡಲು ಬರುತ್ತಾರೆ. ಬೆಳಗ್ಗೆ ಕಾಲೇಜಿಗೆ ಬಂದ ಕೂಡಲೇ ಅವರಿಗೆ ದರ್ಶನವಾಗುವುದು ಈ ಕೊಳಚೆ.
ಕೊಳಚೆ ನಿರ್ಮೂಲನೆ ಮಾಡಿ ಚರಂಡಿ ನಿರ್ಮಿಸಿಕೊಡಬೇಕೆಂದು ಹಲವಾರು ಬಾರಿ ಕೊರಟಗೆರೆ ಪಟ್ಟಣ ಪಂಚಾಯತ್ಗೆ ಶಾಲೆಯ ಆಡಳಿತ ಮಂಡಳಿ ಮನವಿ ಮಾಡಿದರೂ ಕೂಡ ಪಟ್ಟಣ ಪಂಚಾಯತ್ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊಳಚೆ ಇದ್ದರೂ ಕೂಡ ಸಂಬಂಧಪಟ್ಟವರ ಗಮನಕ್ಕೆ ಬಾರದೇ ಇರುವುದು ಸೋಜಿಗ. ಈಗಾಗಲೇ ಲಿಖಿತವಾಗಿ  ಹಲವಾರು ಬಾರಿ ಮನವಿ ನೀಡಿದ್ದರೂ ಸಹ ಕೊಳಚೆ ನಿರ್ಮೂಲನೆಗೊಳಿಸಿಲ್ಲ.
ಈಗಾಗಲಾದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇಲ್ಲೊಂದು ಚರಂಡಿ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement