ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗರದಲ್ಲಿ ಡಬ್ಬಿಂಗ್ ಭೂತದಹನ

Rashmi Kasaragodu
Updated On : 28 Jan 2014, 1:04 am

ಕನ್ನಡಪ್ರಭ ವಾರ್ತೆ     ತುಮಕೂರು     ಜ.27
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎಂ. ಮಹೇಶ್ ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದಲ್ಲಿ ಡಬ್ಬಿಂಗ್ ಭೂತದಹನ ಮಾಡಿ,ಕೋಟೆ ಅಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮಹೇಶ್ ಕುಮಾರ್, 60ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಯಾವುದೇ ಬೆಲೆ ಸಿಗದೆ ಇದ್ದ ಸಂದರ್ಭದಲ್ಲಿ ಡಬ್ಬಿಂಗ್ ಚಿತ್ರಗಳು ಹೆಚ್ಚಾಗಿತ್ತು. ಚಿತ್ರರಂಗವನ್ನೇ ನಂಬಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಆ ಸಂದರ್ಭದಲ್ಲಿ ಡಾ. ರಾಜಕುಮಾರ್ ನೇತೃತ್ವದಲ್ಲಿ ನರಸಿಂಹರಾಜು, ಉದಯಕುಮಾರ್, ಬಾಲಕೃಷ್ಣ ಮುಂತಾದ ನಟರು ಡಬ್ಬಿಂಗ್ ವಿರುದ್ಧ ಹೋರಾಟ ನಡೆಸಿದ್ದರು.
ಇಂದು ಅದೇ ಪರಿಸ್ಥಿತಿ ಎದುರಾಗಿದೆ. ಬೇರೆ ಭಾಷೆಗಳ ಚಿತ್ರಗಳಿಗೆ ಕನ್ನಡದ ಧ್ವನಿ ನೀಡುವುದರಿಂದ ಅದು ಕನ್ನಡ ಸಿನಿಮಾ ಆಗಲು ಸಾಧ್ಯವಿಲ್ಲ. ಕೆಲ ಕನ್ನಡ ದ್ರೋಹಿಗಳು ಲಾಭದ ಆಸೆಗಾಗಿ ಬಂಡವಾಳಶಾಹಿಗಳ ಕೈಗೊಂಬೆಗಳಾಗಿ ನಿರ್ಮಾಪಕ ಸೋಗಿನಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ತರಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಎಂದಿಗೂ ಅಸ್ಪದ ನೀಡಬಾರದು ಎಂದರು.
ಡಬ್ಬಿಂಗ ಕನ್ನಡ ಸಿನಿಮಾ ರಂಗವನ್ನು ನಾಶ ಮಾಡುವುದಲ್ಲದೆ ಕನ್ನಡ ಭಾಷೆಯನ್ನು ಹಾಳು ಮಾಡಲಿದೆ. ಭಾಷೆ ನಾಶವಾದರೆ ಕನ್ನಡ ಜನಾಂಗವೇ ನಾಶವಾದಂತೆ ಆದ್ದರಿಂದ ಡಬ್ಬಿಂಗ್ ಎಂದಿಗೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸರಕಾರ ಯಾವುದೇ ಲಾಭಿಗೆ ಮಣಿಯದೆ ಡಬ್ಬಿಂಗ್ ಪ್ರಸ್ತಾಪವನ್ನು ತಿರಸ್ಕರಿಸಬೇಕು. ಒಂದೇ ವೇಳೆ ಲಾಭಿಗೆ ಮಣಿದು ಡಬ್ಬಿಂಗ್ಗೆ ಅವಕಾಶ ನೀಡಿದರೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿ ಹೋರಾಟಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ನಾರಾಯಣಗೌಡ, ರಾಜಕುಮಾರ್, ಹೇಮಂತ್, ಹನುಮಂತರಾಜು, ಶಶಿರಾಜ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement