ಭೋವಿ ಜನಾಂಗದ ವಿದ್ಯಾರ್ಥಿ ನಿಯಲಕ್ಕೆ ನಿರ್ವಹಣ ಸಮಿತಿ
ಪಾವಗಡ: ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜನಾಂಗದ ಮುಖಂಡರು ಸೋಮವಾರ ಸಭೆ ಸೇರಿ ಪಟ್ಟಣದಲ್ಲಿ ಸುಮಾರು 30ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದ ಭೋವಿ ಜನಾಂಗದ ವಿದ್ಯಾರ್ಥಿ ನಿಯಲಕ್ಕೆ ನಿರ್ವಹಣ ಸಮಿತಿಯನ್ನು ರಚಿಸಲಾಯಿತು. ಇದೇ ಸಂದರ್ಭದಲ್ಲಿ ಭೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿ. ಜಯರಾಮ್ ಮಾತನಾಡಿ ಜನಾಂಗದ ಹಿರಿಯರ ಸಹಕಾರದಿಂದ ಸಂಘ ಮುನ್ನಡೆಸಲಾಗುತ್ತಿದ್ದು, ವಿದ್ಯಾರ್ಥಿ ನಿಲಯಕ್ಕೆ ಕುಡಿಯುವ ನೀರು ಸೇರಿದಂತೆ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಅತಿ ಶೀಘ್ರ ಕಲ್ಪಿಸಿ ಬರುವ ಶೈಕ್ಷಣಿಕ ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ ಎಂದರು. ಭೋವಿ ಸಂಘದ ವಿದ್ಯಾರ್ಥಿನಿಲಯಕ್ಕೆ ಸಹಕಾರ ನೀಡಿದ ಚಿತ್ರದುರ್ಗ ಸಂಸದ ಜನಾರ್ದನಸ್ವಾಮಿ, ಮಾಜಿ ಸಚಿವ ವೆಂಕಟರಮಣಪ್ಪ, ಚಿನ್ನಮ್ಮನಹಳ್ಳಿ ಭೋಜರಾಜ್ ಹಾಗೂ ಎಚ್.ವಿ. ವೆಂಕಟೇಶ್ ಸೇರಿದಂತೆ ಇತರರನ್ನು ಪದಾಧಿಕಾರಿಗಳು ಸ್ಮರಿಸಿದರು.