ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಿತಿ ಪುನರ್ ರಚಿಸುವಂತೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 28 Jan 2014, 1:04 am

ಕ.ಪ್ರ.ವಾರ್ತೆ ಕುಣಿಗಲ್ ಜ.27
ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಏಕಪಕ್ಷೀಯ ತೀರ್ಮಾನ ಕೈಬಿಟ್ಟು ಸಮಿತಿ ಪುನರ್ ರಚಿಸುವಂತೆ ಆಗ್ರಹಿಸಿ ಸೀನಪ್ಪನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸೋಮವಾರ, ಸೀನಪ್ಪನಹಳ್ಲಿ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಮುಖಂಡರಾದ ಲೋಕೇಶ್, ನಾಗರಾಜ್ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚನೆ ಏಕಪಕ್ಷೀಯವಾಗಿದ್ದು ಪೂರ್ವಪರ ಪರಿಶೀಲಿಸದೆ ರಚನೆಗೊಂಡಿರುವ ಸಮಿತಿ ರದ್ದುಗೊಳಿಸುವಂತೆ ಆಗ್ರಹಿಸಿ, ಬೆಸ್ಕಾಂ ಕಚೇರಿ ಮುಂಭಾಗದಿಂದ ತಾಲೂಕು ಕಚೇರಿವರೆಗೂ ಘೋಷಣೆಗಳನ್ನು ಕೂಗಿಕೊಂಡು ಮೆರವಣಿಗೆ ಆಗಮಿಸಿ ಪ್ರತಿಭಟನಾ ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮುಖಂಡರು ಮಾತನಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪುಟ್ಟನರಸಯ್ಯ, ತಾವು ಈಗಾಗಲೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ವರದಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು, ಈ ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿ, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಅಶಾಂತ ವಾತಾವರಣಕ್ಕೆ ಎಡೆಮಾಡಿಕೊಡದೆ ಶಾಂತ ರೀತಿಯಿಂದಿರುವಂತೆ, ಶೀಘ್ರದಲ್ಲೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಪ್ರಮುಖರಾದ ರುದ್ರಯ್ಯ, ಶಾರದಮ್ಮ, ಬಸಪ್ಪ, ಸಿದ್ದನಂಜಮ್ಮ,ಶಿವಮ್ಮ ಇತರರು ಇದ್ದರು.
ಸೀನಪ್ಪನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ವೇಳೆ, ಹೊಸಕೆರೆ ಗ್ರಾಮದ ನಾಗರಾಜ್ ಎಂಬಾತ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದು, ಇದು ಗ್ರಾಮಸ್ಥರನ್ನು ಕೆರಳಿಸಿ, ಪಿಎಸೈ ಮತ್ತು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲೆ ಆತನ ಮೇಲೆ ಹಲ್ಲೆ ಮಾಡಲು ಅಟ್ಟಾಡಿಸಿದರು. ಕೂಡಲೆ ಎಚ್ಚೆತ್ತ ಪಿಎಸೈ ಗುರುಪ್ರಸಾದ್ ಸಿಬ್ಬಂದಿ, ಮಧ್ಯಪ್ರವೇಶಿಸಿ ನಾಗರಾಜ್ನನ್ನು ರಕ್ಷಿಸಿ ಹೊರಕ್ಕೆ ಕಳಿಸುವ ಮೂಲಕ ಅನಾಹುತ ತಪ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement