ಕಾಂಗ್ರೆಸ್ನದ್ದು ಬ್ರಿಟಿಷ್ ಆಡಳಿತದ ಪಡಿಯಚ್ಚು; ರೈತಸಂಘ ಆರೋಪ
ಚಿಕ್ಕನಾಯಕನಹಳ್ಳಿ: ಪ್ರಜಾಪ್ರಭುತ್ವದ ಬಗ್ಗೆ ಅರಿವಿಲ್ಲದವರು ಇಂದು ನಮ್ಮನ್ನಾಳುತ್ತಿರುವುದರಿಂದ ದೇಶದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ ಎಂದು ರೈತ ಸಂಘದ ಕಾರ್ಯಕರ್ತರು ಸರ್ಕಾರವನ್ನು ಟೀಕಿಸಿದರು.
ಬೆಂಗಳೂರಿನಲ್ಲಿ ರೈತರ ಬಂಧನವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ಸರ್ಕಾರಗಳು ಬ್ರಿಟಿಷ್ ಸರ್ಕಾರವನ್ನು ನಾಚಿಸುವ ರೀತಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಇವರ ಅಧಿಕಾರ ಇತಿಹಾಸದ ತುಘಲಕ್ ದರ್ಬಾರ್ನ್ನು ನಾಚಿಸುತ್ತದೆ. ದುಡಿಯುವ ಕೈಗಳಿಗೆ ಕೆಲಸ ಕೊಡದೆ 1ಕ್ಕೆ ಅಕ್ಕಿ ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡಿ ದೇಶದ ಕೃಷಿ ರಂಗದ ಅವನತಿಗೆ ಮುನ್ನುಡಿ ಬರೆದಿದ್ದಾರೆ. ಕೃಷಿ ಕಾರ್ಮಿಕರ ಸಮಸ್ಯೆಯಿಂದ, ಯಾಂತ್ರೀಕರಣಕ್ಕೆ ಹೊಂದಿಕೊಂಡ ಪರಿಣಾಮ ಅನೇಕ ರೀತಿಯ ಸೌಕರ್ಯಗಳು ದುರ್ಲಬವಾಗಿವೆ. ಮತಬ್ಯಾಂಕ್ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
60 ವರ್ಷಗಳಿಂದ ಅದೇ ಹಳೆ ಘೋಷಣೆ ಗರೀಭಿ ಹಠಾವೋಗೆ ಗಂಟು ಬಿದ್ದಿದ್ದಾರೆ. ಇವರಿಗೆ ರಾಷ್ಟ್ರದ ಅಭಿವೃದ್ಧಿಗಿಂತ ಗಟ್ಟಿಯಾಗಿ ಅಧಿಕಾರ ಹಿಡಿಯಲು ಬಡವರ್ಗವನ್ನು ಯಥಾಸ್ಥಿಯಲ್ಲಿರುವಂತೆ ಮಾಡುವುದರಲ್ಲಿ ಆಸಕ್ತಿಇದೆ. ಸರ್ಕಾರ ಜಾರಿಗೆ ತರುವ ಯೋಜನೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯಿಲ್ಲದೆ, ದಲ್ಲಾಳಿಗಳಿಗೆ ಕಮಿಷನ್ ಕೊಟ್ಟು ಜನಸಾಮಾನ್ಯರು ಸರ್ಕಾರದ ಸವಲತ್ತು ಪಡೆಯಬೇಕಾದ ಸ್ಥಿತಿಯುಂಟಾಗಿದೆ. ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ ಸಾಲವಿದ್ದರೆ, ಅಧಿಕಾರಿಗಳ ತಲಾದಾಯ ಮಾತ್ರ ಪ್ರತಿವರ್ಷ ಹೆಚ್ಚುತ್ತಿದೆ. ಇದಕ್ಕೆಲ್ಲಾ ಜನಸಾಮಾನ್ಯರೇ ನೇರ ಹೊಣೆಗಾರರು. ಎಲ್ಲಿಯವರೆಗೆ ನಾವು ಜಾಗೃತಿಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಶೋಷಣೆ ನಡೆಯುತ್ತದೆ. ಆದ್ದರಿಂದ ಜನಸಾಮಾನ್ಯರು ಜಾಗೃತಗೊಳ್ಳಬೇಕು ಎಂದರು.
ನಂತರ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ನೀರಾವರಿ ಪಂಪ್ಸೆಟ್ಗಳಿಗೆ ಗುಣಮಟ್ಟದ ಉಚಿತ ವಿದ್ಯುತ್, 11 ಇ ಸ್ಕೆಚ್ಗೆ ನಿಗದಿಪಡಿಸಿರುವ ಶುಲ್ಕವನ್ನು ಕಡಿಮೆ ಮಾಡಬೇಕು. ಕೊಬ್ಬರಿಗೆ ಸೂಕ್ತವಾದ ಶಾಶ್ವತ ಬೆಲೆ ನೀಡಬೇಕು. ರೈತನ ಒಣಗಿದ ಪ್ರತಿ ತೆಂಗಿನ ಮರಕ್ಕೆ 25 ಸಾವಿರ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್ ಪುಟ್ಟರಾಮಯ್ಯನವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.