ಮಹಿಳೆಯರಿಗೆ ನಾಗರಿಕ ಪ್ರಜ್ಞೆ, ಜ್ಞಾನವಿಕಾಸದ ಅರಿವು ಅಗತ್ಯ
ಚೇಳೂರು: ಮನೆಯಲ್ಲಿ ಮಹಿಳೆಯರಿಗೆ ಮುಖ್ಯವಾಗಿ ನಾಗರಿಕ ಪ್ರಜ್ಞೆ ಮತ್ತು ಜ್ಞಾನವಿಕಾಸದ ಅರಿವು ಇರಬೇಕು ಎಂದು ಸಹ ಶಿಕ್ಷಕ ಆರ್.ಎಸ್. ಲೋಕೇಶ್ ತಿಳಿಸಿದರು.
ಚೇಳೂರಿನಲ್ಲಿ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮೀಣ ಅಭಿವೃಧ್ದಿ ಯೋಜನೆಯಡಿ ಚೇಳೂರು ವಲಯದ ಸ್ಫೂರ್ತಿ ಮಹಿಳಾ ಜ್ಞಾನವಿಕಾಸದ ವತಿಯಿಂದ ಆಯೋಜಿಸಿದ್ದ ಶ್ರೀ ಮರಳು ಬಸವೇಶ್ವರ ದೇವಾಲಯದ ಆವರಣದಲ್ಲಿ ನಾಗರೀಕ ಪ್ರಜ್ಞೆ ಮತ್ತು ಜ್ಞಾನವಿಕಾಸ ಹಾಗೂ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಮಹಿಳೆಯರು ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಹಕರಿಸಬೇಕು ಮಕ್ಕಳು ನಡೆ-ನುಡಿಯ ಬಗ್ಗೆ ಗಮನ ಹರಿಸಿ ಶಾಲೆಗಳಿಗೆ ಸರಿಯಾಗಿ ಹೋಗುತ್ತಾರೋ ಇಲ್ಲಮೊ ಎಂಬುದನ್ನು ಗಮನಿಸಿ ಶಾಲೆಗಳಿಗೆ ಭೇಟಿ ನೀಡಿ ಆ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಅರಿತುಕೊಳ್ಳಬೇಕು ಎಂದರು.
ಮನೆ-ಮತ್ತು ಮನೆಯಂಗಳ ಸ್ವಚ್ಛವಾಗಿಟ್ಟುಕೊಂಡು ಚರಂಡಿ ಮತ್ತು ಗ್ರಾಮ ನೈರ್ಮಲ್ಯದ ಬಗ್ಗೆ ಒಂದು ಬೀದಿಯ ಎಲ್ಲ ಮಹಿಳೆಯರು ಸೇರಿಕೊಂಡು ಆ ಬೀದಿಯನ್ನು ಸ್ವಚ್ಛವಾಗಿ ಇಡಲು ಸಹಕರಿಸಿದರೆ ಅದು ನಾಗರಿಕ ಪ್ರಜ್ಞೆಗೆ ಪ್ರೇರಣೆಯಾಗುತ್ತದೆ ಎಂದರು. ಸಮಾರಂಭದಲ್ಲಿ ವಲಯದ ಮೇಲ್ವಿಚಾರಕ ಹರೀಶ್, ಸ್ಫೂರ್ತಿ ಮಹಿಳಾ ಜ್ಞಾನವಿಕಾಸದ ಅಧ್ಯಕ್ಷೆ ಅನಿತ, ತಾಲೂಕು ಜ್ಞಾನವಿಕಾಸದ ಸಂಯೋಜಕಿ ಸಕ್ಕೂಬಾಯಿ, ಗ್ರಾಮದ ಮುಖಂಡರಾದ ರಂಗಸ್ವಾಮಿ, ಸೇವಾಪ್ರತಿನಿಧಿಗಳಾದ ಉಷಾರಾಣಿ, ರಾಜರಾಜೇಶ್ವರಿ, ಮಂಜುಳ, ಇತರರು ಹಾಜರಿದ್ದರು.