ಸರಳ ಜೀವನದಿಂದ ಆರೋಗ್ಯ: ಶ್ರೀ
ಶಿರಾ: ಜನಸಾಮಾನ್ಯರು ಆಡಂಬರಕ್ಕೆ ಮಾರು ಹೋಗದೆ ಇತಿ-ಮಿತಿಯಲ್ಲಿ ಸರಳ ಜೀವನ ನಡೆಸುವಂತಾದಾಗ ಮಾತ್ರ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿಯ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಡಾ. ಪ್ರವೀಣ್ ಮಾತನಾಡಿ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಗ್ರಾಮೀಣ ಪ್ರದೇಶದ ಬಡವರ ಪಾಲಿಗೆ ವರದಾನವಾಗಿದ್ದು ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗಳು ಬಿಪಿಎಲ್ ಫಲಾನುಭವಿಗಳಲ್ಲಿ ಕಂಡು ಬಂದಾಗ ತಾವು ಬಯಸುವ ರಾಜ್ಯದ ಪ್ರತಿಷ್ಟಿತ ಅಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುವುದು. ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ವೈದ್ಯರಲ್ಲಿ ಹೇಳಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ತಿಮ್ಮರಾಜು, ವಿಕ್ರಂ ಸ್ಪೆಷಾಲಿಟಿ ಅಸ್ಪತ್ರೆಯ ವೈದ್ಯ ಡಾ. ರಮೇಶ್, ಡಾ. ವಿಶ್ವನಾಥ್, ಡಾ. ಶ್ರೀಕಾಂತ್, ಡಾ. ಇಂತಿಯಾಜ್, ಗುರುದೇವ್, ವೆಂಕಟರೆಡ್ಡಿ ಸೇರಿದಂತೆ ಹಲವರಿದ್ದರು. ನೂರಾರು ಮಂದಿ ಶಿಬಿರಕ್ಕೆ ಆಗಮಿಸಿ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರು.