ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಶಾ ಕಾರ್ಯಕರ್ತೆಯರು ಸಂಘಟಿತರಾಗಲಿ

Rashmi Kasaragodu
Updated On : 30 Jan 2014, 1:34 am

ಕ.ಪ್ರ. ವಾರ್ತೆ    ತುಮಕೂರು    ಜ. 29
ಆಶಾ ಕಾರ್ಯಕರ್ತೆಯರು ಸರ್ಕಾರದಿಂದ ಬರಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಿ ಹೋರಾಟ ರೂಪಿಸಬೇಕೆಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಸಲಹೆ ನೀಡಿದರು.
ಅವರು ತುಮಕೂರಿನಲ್ಲಿ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಆಶಾ ಕಾರ್ಯಕರ್ತೆಯರ 2ನೇ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿವಿಧ ತಾಲೂಕುಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಹೋರಾಟದ ಮೂಲಕ ಪಡೆದುಕೊಂಡ ಸೌಲಭ್ಯಗಳು ಹಾಗೂ ದಿನನಿತ್ಯ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾಗಲಕ್ಷ್ಮೀ ಅವರು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ಸುಮಾರು ನಾಲ್ಕೈದು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನದ ಜೊತೆಗೆ ರಾಜ್ಯ ಸರ್ಕಾರವೂ ಸಹ ಅಷ್ಟೇ ಮೊತ್ತದ ಹಣವನ್ನು ಪ್ರೋತ್ಸಾಹಧನವಾಗಿ ನೀಡುತ್ತದೆ. ಅಂದರೆ ಐದು ಪ್ರಮುಖ ಜವಾಬ್ದಾರಿಗಳಿಗೆ ಮಾಸಿಕ 1 ಸಾವಿರ ರು. ಕೇಂದ್ರ ಸರ್ಕಾರದಿಂದ ದೊರೆತರೆ ರಾಜ್ಯ ಸರ್ಕಾರ 1 ಸಾವಿರ ರು. ಗಳನ್ನು ಪ್ರೋತ್ಸಾಹಧನವಾಗಿ ನೀಡುತ್ತದೆ. ಜೊತೆಗೆ ಹೆರಿಗೆ, ಪೋಲಿಯೊ ಕಾರ್ಯಕ್ರಮ, ಸರ್ವೆ ಕಾರ್ಯಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನವಿದ್ದು, ಆಶಾ ಕಾರ್ಯಕರ್ತೆಯರು ಪಡೆಯುವ ಹೆಚ್ಚುವರಿ ಪ್ರೋತ್ಸಾಹಧನಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರವೂ ಸಹ ಅಷ್ಟೆ ಪ್ರಮಾಣದ ಧನವನ್ನು ನೀಡುತ್ತದೆ ಎಂದರು.
ತಪ್ಪು ಮಾಹಿತಿ: ಇದು 1200 ರು. ಎಂದು ತಪ್ಪು ಮಾಹಿತಿಯನ್ನು ಕೆಲವರು ನೀಡುತ್ತಿದ್ದಾರೆ. ಅದು ಸರಿಯಲ್ಲ. ಕಾರ್ಯಕರ್ತೆಯರು ಎಷ್ಟು ಪ್ರೋತ್ಸಾಹಧನ ಪಡೆಯುತ್ತಾರೊ ಅಷ್ಟೇ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುವುದೆಂದು ಸ್ಪಷ್ಟಪಡಿಸಿದರು. ಸಂಘವು ಸರ್ಕಾರದ ಮುಂದಿಟ್ಟ ಹಲವು ಬೇಡಿಕೆಗಳು ಈಡೇರಿವೆ. ಆದೇಶಗಳು ಹೊರಬಂದಿವೆ. ಆದರೂ ಆಶಾಕಾರ್ಯಕರ್ತೆಯರಿಗೆ ತಲುಪದಿರುವುದು ಬೇಸರದ ವಿಷಯವಾಗಿದೆ.
ಸಂಘದ ಜಿಲ್ಲಾ ಸಲಹೆಗಾರ ಎಸ್.ಎನ್. ಸ್ವಾಮಿಯವರು ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರು ಸಂಘಟಿತರಾಗಿ ಮುನ್ನಡೆಯಬೇಕು. ಸರ್ಕಾರದ ನೀತಿಗಳು ಕಾರ್ಮಿಕ ವಿರೋಧಿ ನೀತಿಗಳಾಗಿವೆ. ಶಿಕ್ಷಣ, ವೈದ್ಯಕೀಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ಜಾರಿಯಾಗುತ್ತಿರುವ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರು ಡಿ  ಗ್ರೂಪ್ ನೌಕರರನ್ನಾಗಿ ಕಾಯಂ ಮಾಡಬೇಕೆಂದು ಹೋರಾಡುತ್ತಿದ್ದಾರೆ. ಈ ಬೇಡಿಕೆ ಈಡೇರಬೇಕೆಂದರೆ ಬಲಿಷ್ಠ ಹಾಗೂ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಯು ಬಹಳ ಅಗತ್ಯವಾಗಿದೆ. ಅಂತಹ ಸಂಘಟನೆ ಆಲ್ ಇಂಡಿಯಾ ಯುಟಿಯುಸಿ ನೇತೃತ್ವದಲ್ಲಿ ನೀವಿಂದು ಹೋರಾಡುತ್ತಿರುವಿರಿ. ತಾಲೂಕು ಮಟ್ಟದಲ್ಲಿಯೂ ಬಲಿಷ್ಠ ಸಂಘಟನೆಯನ್ನು ರೂಪಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಹೋರಾಟದಲ್ಲಿ ಜಯಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಂಗೀಕಾರ: ಜಾಹಿದಾ ಶಿರೀನ್ ಅವರು ಗೌರವ ಅಧ್ಯಕ್ಷರಾಗಿ, ನರಸಿಂಹರಾಜು ಅಧ್ಯಕ್ಷರಾಗಿ, ಹೇಮಾವತಿ ಕಾರ್ಯದರ್ಶಿಗಳಾಗಿರುವ ಹಾಗೂ ಬಸವರಾಜಮ್ಮ, ಚೂಡಾಮಣಿ, ಮೀನಾಕ್ಷಿ, ನಿರ್ಮಲಾ, ಸುಜತಾ ಅವರು ಉಪಾಧ್ಯಕ್ಷರಾಗಿರುವ, ಸುಧಾಮಣಿ, ಗೌರಮ್ಮ, ಉಮಾದೇವಿ, ಶಾಯಿನಾಬಾನು, ಶಿವಮ್ಮ ಜಂಟಿ ಕಾರ್ಯದರ್ಶಿಗಳಾಗಿರುವ ಜಿಲ್ಲಾ ಸಮಿತಿಯು ಸರ್ವಾನುಮತದಿಂದ ಅಂಗೀಕಾರವಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಾಹಿದಾ ಶಿರೀನ್ ವಹಿಸದ್ದರು. ನೂತನ ಜಿಲ್ಲಾ ಅಧ್ಯಕ್ಷ ನರಸಿಂಹರಾಜು ಮಾತನಾಡಿ ತಮ್ಮ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವನ್ನು ಬಲಪಡಿಸಬೇಕೆಂದು ಕರೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement