ಬಿಜೆಪಿ ಟಿಕೆಟ್ ಯಾರಿಗೆ?
ಕ.ಪ್ರ.ವಾರ್ತೆ ತುಮಕೂರು ಜ. 29
ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ತಮ್ಮನ್ನು ಭೇಟಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡಿದ್ದಾರೆ. ತಮ್ಮನ್ನು ಭೇಟಿಯಾಗಿರುವ ಸಂಸದರು ಬಿಜೆಪಿಗೆ ಬರುವುದಾಗಿ ತಿಳಿಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ಬಸವರಾಜು ಅವರು ಬಿಜೆಪಿಯಿಂದ ಸಸ್ಪೆಂಡ್ ಆಗಿದ್ದಾರೆ. ಸಸ್ಪೆಂಡ್ ತೆರವು ಆಗಬೇಕು ಎಂದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಯಾರು ಬಿಜೆಪಿ ಅಭ್ಯರ್ಥಿ ಎಂಬುದು ಸೇರಿದಂತೆ ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ಶೀಘ್ರ ಅಂತಿಮಗೊಳಿಸಲಾಗುವುದು. ಈಗಾಗಲೇ ಲೋಕಸಭಾ ವ್ಯಾಪ್ತಿಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಜಿಲ್ಲಾ ಸಮಿತಿಗಳು ಪಟ್ಟಿಯನ್ನು ರವಾನಿಸಿದೆ. ಅದನ್ನು ರಾಜ್ಯ ಸಮಿತಿ ಅಂತಿಮಗೊಳಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಿಮ್ಮನ್ನು ಸಂಸದರು ಭೇಟಿ ಮಾಡಿದ್ದಾರೆ, ಅಂದರೆ ನಿಮಗೆ ಹತ್ತಿರವಾಗಿದ್ದಾರೆ ಅಂತಾ ತಾನೇ ಎಂಬ ಪ್ರಶ್ನೆಗೆ ನನಗೆ ಸೊಗಡು ಶಿವಣ್ಣ, ಸುರೇಶಗೌಡ, ಬಿ.ಸಿ. ನಾಗೇಶ್ ಎಲ್ಲರೂ ಆಪ್ತರು, ಹತ್ತಿರದವರು ಎಂದು ಜಾರಿಕೊಂಡರು.
ಫೆ.23ಕ್ಕೆ ಸಮಾವೇಶ: ತುಮಕೂರಿನಲ್ಲಿ ಬರುವ ತಿಂಗಳ 23 ರಂದು ಹಿಂದುಳಿದ, ದಲಿತ ವರ್ಗದವರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಮೋರ್ಚಾ, ಸ್ಲಂ ಮೋರ್ಚಾ, ಎಸ್ಸಿ, ಎಸ್ಟಿ ಮೋರ್ಚಾದ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಸಾರ್ವಜನಿಕರಿಗೆ ಪ್ರವೇಶವಿದೆ ಎಂದು ತಿಳಿಸಿದರು.
ಪ್ರಧಾನವಾಗಿ ಪ್ರಸ್ತಾಪ: ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶೋಷಿತ ವರ್ಗಕ್ಕೆ ಹಲವಾರು ಜನೋಪಯೋಗಿ ಕಾರ್ಯವನ್ನು ಅನುಷ್ಠಾನಗೊಳಿಸಿತ್ತು. ಆದರೆ ಕಾಂಗ್ರೆಸ್ ಯಾಕೋ ಶೋಷಿತ ವರ್ಗದವರ ಬಗ್ಗೆ ಉದಾಸೀನ ಮನೋಭಾವ ತಳೆದಿದೆ ಎಂದರು. ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಯೋಜನೆಗಳನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ಈ ಸಮಾವೇಶದಲ್ಲಿ ಈ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸಲಾಗುವುದು ಎಂದರು.
ಮೀನಮೇಷ: ತಮ್ಮ ಸರ್ಕಾರ ಕೊಳಚೆ ಪ್ರದೇಶದ ಜನರಿಗೆ ಹಕ್ಕು ಪತ್ರ ಕೊಡುವ ಸಂಬಂಧ ವಿಧಾನಸಭೆಯಲ್ಲಿ ಬಿಲ್ ಅನ್ನು ಪಾಸ್ ಮಾಡಲಾಗಿತ್ತು. ಅಧಿಕಾರದ ಕೊನೆಯಲ್ಲಿ ಕೆಲವರಿಗೆ ಹಕ್ಕು ಪತ್ರ ವಿತರಿಸಲಾಯಿತು. ಆದರೆ ಕಾಂಗ್ರೆಸ್ ಮಾತ್ರ ಹಕ್ಕು ಪತ್ರ ಕೊಡಿಸುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದರು.
ವಸತಿ ಸಚಿವ ಅಂಬರೀಶ್ ಅವರು ಕಡು ಬಡವರಿಗೆ ವಸತಿ ಕಲ್ಪಿಸಲು 5 ಸಾವಿರ ಕೋಟಿ ರು. ಬೇಕಾಗಿತ್ತು. ಆದರೆ ಈಗ ಕೊಟ್ಟಿರುವ 700 ಕೋಟಿಯಲ್ಲಿ ಹೇಗೆ ಕೊಡಲಿ ಎಂದು ಬಹಿರಂಗವಾಗಿ ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರ ಈ ವರ್ಗದವರಿಗೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಜಿ ಸಚಿವರಾದ ಸೊಗಡು ಶಿವಣ್ಣ, ನಾರಾಯಣಸ್ವಾಮಿ, ಬಿ.ಸಿ. ನಾಗೇಶ್, ಎಂ.ಡಿ. ಲಕ್ಷ್ಮೀನಾರಾಯಣ ಮುಂತಾದವರು ಇದ್ದರು.