ಬೆಳೆಗಳಿಗೆ ನೀರು ಬಿಡಲು ಎಬಿವಿಪಿ ಆಗ್ರಹ
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿಯ ನೀರಗುಂದ, ಅಜ್ಜೇನಹಳ್ಳಿ, ಮಂಚೇನಹಳ್ಳಿ, ಎನ್.ಮಾವಿನಹಳ್ಳಿ, ಕೋಳಘಟ್ಟ, ಲೋಕಮ್ಮನಹಳ್ಳಿ, ಮಂತ್ರಿಕೇನಹಳ್ಳಿ, ಹರಿದಾಸನಹಳ್ಳಿ, ಮುಂತಾದ ಹತ್ತಾರು ಹಳ್ಳಿಗಳಿಗೆ ಕಳೆದ ಮೂರು ವರ್ಷಗಳಿಂದ ಮಳೆಯೂ ಇಲ್ಲದೇ ಬೆಳೆಗಳು ಹಾಳಾಗುತ್ತಿವೆ.
ಬೆಳೆಗಳಿಗೆ ನೀರಿಲ್ಲದ ಪರಿಣಾಮ ನೂರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ತೆಂಗು, ಅಡಕೆ ಹಾಗೂ ಬಾಳೆ ಗಿಡಗಳು ಸಂಪೂರ್ಣ ಹಾಳಾಗಿವೆ. ಆದರೆ ಈ ಬಾರಿ ಹೇಮಾವತಿ ನೀರು ತುಂಬಿ ತಾಲೂಕಿಗೆ ಹರಿದು ಬಂದಿದ್ದರೂ ಸಹ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಅವಕಾಶವಿಲ್ಲದಾಗಿದೆ. ಈ ಗ್ರಾಮಗಳು ತಾಲೂಕಿನ ಪ್ರಮುಖ ಮಲ್ಲಾಘಟ್ಟ ಕೆರೆಗೆ ಕೇವಲ 5 ಕಿಮೀ ದೂರದಲ್ಲಿದ್ದರೂ ನೀರನ್ನು ಪಡೆಯಲು ಅವಕಾಶವಾಗುತ್ತಿಲ್ಲ. ಈ ಭಾಗದ ಪ್ರಮುಖ ಕೆರೆಯಾದ ನೀರಗುಂದ ಕೆರೆಗೆ ನೀರು ಹರಿಸಬಹುದು. ಆದರೆ ರಾಜಕಾರಣಿಗಳಲ್ಲಿ ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಇಲ್ಲದಾಗಿದೆ ಎಂದು ಎಬಿವಿಪಿಯ ಜಿಲ್ಲಾ ಪ್ರಮುಖ್ ಎಂ.ಹರಿಪ್ರಸಾದ್ ಟೀಕಿಸಿದ್ದಾರೆ. ಪಟ್ಟಣದಲ್ಲಿ ನೀರಿಗಾಗಿ ಜಾಥಾ ನಡೆಸಿದ ಎಬಿವಿಪಿಯ ಕಾರ್ಯಕರ್ತರು ಕೂಡಲೇ ಕೆರೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ತಾಲೂಕು ಕಾರ್ಯದರ್ಶಿ ಶ್ರೀಹರಿ, ಕಾರ್ಯಕರ್ತರಾದ ವಿನಯ್, ಪ್ರದೀಪ್, ಉದಯ್ ಹೇಮಂತ್, ರತೀಶ್, ನೀರಗುಂದದ ಮಾರುತಿ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಿದ್ದರು. ತಹಸೀಲ್ದಾರ್ ಮಂಜೇಗೌಡರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೊರಟಗೆರೆ ಪಟ್ಟಣ ಪಂಚಾಯತಿಗೆ ಸದಸ್ಯರ ನೇಮಕ
ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶಿಫಾರಸಿನ ಮೇರೆಗೆ ನಾಮಿನಿ ಸದಸ್ಯರಗಳಾಗಿ 3 ಜನರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ 14 ಮಂದಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿದ್ದು ಸರ್ಕಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಶಿಫಾರಿಸಿನ ಮೇರೆಗೆ ಕರ್ನಾಟಕ ಪುರಸಭೆ ಕಾಯ್ದೆ 1964 ಪ್ರಕರಣ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಟ್ಟಣದ ಕೆ.ವಿ.ಪುರುಷೋತ್ತಮ್, ಕೆ.ಆರ್. ಓಬಳರಾಜು, ಕೆ.ಬಿ.ಲೋಕೇಶ್ ಅವರನ್ನು ಪಟ್ಟಣ ಪಂಚಾಯಿತಿಗೆ ನಾಮಿನಿ ಸದಸ್ಯರಾಗಿ ನಾಮ ನಿದೇಶನ ಮಾಡಿದೆ.