ಗೋಣೀತುಮಕೂರಲ್ಲಿ ಚಿರತೆ: ಆತಂಕದಲ್ಲಿ ಜನತೆ
ತುರುವೇಕೆರೆ: ಪಟ್ಟಣದ ಸಮೀಪವೇ ಇರುವ ಗೋಣೀತುಮಕೂರಿನಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಗ್ರಾಮ ಹಾಗೂ ಅಕ್ಕಪಕ್ಕದ ಜನತೆ ತಲ್ಲಣಗೊಂಡಿದ್ದಾರೆ.
ಬುಧವಾರ ರಾತ್ರಿ ಗೋಣಿತುಮಕೂರಿನ ದೇವಾಲಯ ಅರ್ಚಕ ಷಡಕ್ಷರ ಸ್ವಾಮಿ ತಮ್ಮ ಜಮೀನಿನ ಕಡೆಯಿಂದ ಗ್ರಾಮದೆಡೆಗೆ ಬರುತ್ತಿದ್ದ ವೇಳೆ ಕಾಡು ಹಂದಿ ಹಾಗೂ ಚಿರತೆ ನಡುವೆ ಕಾದಾಟ ನಡೆಯುತ್ತಿತ್ತು. ಇದನ್ನು ಸನಿಹದಲ್ಲೇ ಕಂಡ ಷಡಕ್ಷರಸ್ವಾಮಿ ಗಾಬರಿಗೊಂಡು ಗ್ರಾಮದ ಜನರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮದ ಹತ್ತಾರು ಯುವಕರು ಆಯುಧಗಳ ಸಹಿತ ಜಮೀನಿನ ಬಳಿ ಸಾಗುವಷ್ಟರಲ್ಲಿ ಎರಡೂ ಪ್ರಾಣಿಗಳು ಕಣ್ಮರೆಯಾಗಿದ್ದವು. ರಾತ್ರಿಯೂ ಆಗಿದ್ದರಿಂದ ಪ್ರಾಣಿಗಳನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಗುರುವಾರ ಬೆಳೆಗ್ಗೆ ಯಥಾ ಪ್ರಕಾರ ಗ್ರಾಮದ ಜನರು ಚಿರತೆ ಹಾಗೂ ಕಾಡು ಹಂದಿ ಕಾದಾಡಿದ ಸ್ಥಳವನ್ನು ಪರಿಶೀಲನೆ ಮಾಡಲಾಗಿ ರಕ್ತ ಸುರಿದಿದ್ದ ದೃಶ್ಯ ಕಂಡು ಬಂದಿದೆ. ಇದರಿಂದ ಆತಂಕಗೊಂಡ ಜನರು ತಹಸೀಲ್ದಾರ್ ನಂಜಪ್ಪ , ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ರಕ್ತ ಸುರಿದಿರುವ ಸ್ಥಳವನ್ನು ಹಾಗೂ ಕಾಲಿನ ಹೆಜ್ಜೆ ಗುರುತನ್ನು ಗುರುತಿಸಿ ಅದು ಚಿರತೆಯದೇ ಎಂದು ಧೃಢಪಡಿಸಿದ್ದಾರೆ. ಕಾರ್ಯಪ್ರವೃತ್ತರಾಗಿರುವ ತಹಸೀಲ್ದಾರ್ ಅವರು ಧ್ವನಿವರ್ಧಕದ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹಲವಾರು ಕಡೆ ಭಿತ್ತಿ ಪತ್ರವನ್ನೂ ಸಹ ಅಂಟಿಸಿ ಜಾಗೃತಿ ಮೂಡಿಸಿದ್ದಾರೆ. ಕತ್ತಲು ಆವರಿಸುತ್ತಿದ್ದಂತೆ ಜನ ಜಾನುವಾರುಗಳು ಹೊರಬಾರದಂತೆ ಸೂಚಿಸಿದ್ದಾರೆ.
ಶಾಲಾ ಮಕ್ಕಳು ಆತಂಕದಲ್ಲಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್ ಹಾಗೂ ಮಾನಸಾ ಗಾರ್ಡನ್ ಶಾಲೆಯ ಆಡಳಿತ ಮಂಡಲಿ ಚಿರತೆಯ ಆಗಮನದ ಸುದ್ದಿಯಿಂದ ಭಯಭೀತರಾಗಿದ್ದಾರೆ. ತಮ್ಮ ಶಾಲಾ ಮಕ್ಕಳನ್ನು ಶಾಲೆಯಿಂದ ಹೊರಬಿಡದೇ ಕಾಯಲು ಆರಂಭಿಸಿದ್ದಾರೆ. ಮಧ್ಯಾಹ್ನದ ಊಟದ ವೇಳೆ ಶಾಲೆಯ ಅಂಗಳಗಳಲ್ಲಿ ಊಟ ಮಾಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಇಂದು ಶಾಲೆಯ ಕೊಠಡಿಯ ಒಳಗೇ ಮಕ್ಕಳನ್ನು ಕೂರಿಸಿ ಊಟ ಮಾಡಿಸಿದ್ದಾರೆ. ಆಟಕ್ಕೂ ಬಿಡದೇ ಶಾಲಾ ಕೊಠಡಿಯಲ್ಲೇ ಮಕ್ಕಳನ್ನು ಇಟ್ಟು ಕಾಪಾಡಿದ್ದಾರೆ. ಚಿರತೆಯ ಆಗಮನದಿಂದ ಎಲ್ಲೆಲ್ಲೂ ಆತಂಕ ಮನೆ ಮಾಡಿದೆ. ಆದಷ್ಟೂ ಎಚ್ಚರಿಕೆಯಿಂದ ಇರಲು ತಾಲೂಕು ಆಡಳಿತ ಸೂಚನೆ ನೀಡಿದೆ. ಜಮೀನಿನ ಕಡೆ ಹೋಗುವ ರೈತರು ಸಹ ಜಮೀನಿನತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಪಟ್ಟಣದಲ್ಲಿ ಹಾಗೂ ಆಜೂ ಬಾಜೂ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ಕೊಡಲಾಗುತ್ತಿದೆ. ಗೋಣಿತುಮಕೂರಿನಲ್ಲಿ ಕಾಡು ಹಂದಿ ಹಾಗೂ ಚಿರತೆಯ ನಡುವಿನ ಕಾದಾಟದ ನಂತರ ಇದುವರೆಗೂ ಯಾವುದೇ ದಾಳಿಯ ಬಗ್ಗೆ ಮಾಹಿತಿ ಇಲ್ಲ.