ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದಲಿತ ಕಾಲೋನಿಗಳ ಸಮಸ್ಯೆ ಶೀಘ್ರ ಪರಿಹರಿಸಿ

Rashmi Kasaragodu
Updated On : 31 Jan 2014, 1:20 am

ಗುಬ್ಬಿ: ದಲಿತ ಕಾಲೋನಿಗಳಲ್ಲಿ ಮೂಲಭೂತ ಸಮಸ್ಯೆಗಳಿದ್ದು ಅವುಗಳನ್ನು ತ್ವರಿತವಾಗಿ ಬಗೆಹರಿಸುವತ್ತ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ಮುಖಂಡರು ನಾಗಸಂದ್ರ ಗ್ರಾಮದಲ್ಲಿ 2500ರು.ಗೆ ದಲಿತರೊಬ್ಬರನ್ನು ಜೀತಕ್ಕಿಟ್ಟುಕೊಂಡಿದ್ದು ಕೂಡಲೇ ಜೀತ ವಿಮುಕ್ತಿಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ವೃತ್ತ ಆರಕ್ಷಕ ನಿರೀಕ್ಷಕರ ಕಚೇರಿಯಲ್ಲಿ ಏರ್ಪಡಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು  ತಾಲೂಕಿನ ಅಂಡನಹಳ್ಳಿ, ಮುಸಕೊಂಡ್ಲಿ, ಕಾರೇಕುರ್ಚಿ, ಕುಂದುರನಹಳ್ಳಿ ಮುಂತಾದ ಗ್ರಾಮಗಳ ದಲಿತ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು ಇದನ್ನು ತಡೆಗಟ್ಟುವಂತೆ ಗ್ರಾಮಸ್ಥರು ಹಲವಾರು ಬಾರಿ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ  ಕನಿಷ್ಠ ಪಕ್ಷ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೂ ಹೋಗದೆ ಕಂಡರೂ ಕಾಣದಂತೆ ವರ್ತಿಸುತ್ತಿರುವ ಅಬಕಾರಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾದಾನ ವ್ಯಕ್ತಪಡಿಸಿದ ದಲಿತ ಸಂಘಟನೆಯ ಮುಖಂಡರು ಗ್ರಾಮಗಳ ಯುವಕರು, ಮಕ್ಕಳು ಕುಡಿತದ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ಕಾಲೋನಿಗಳಲ್ಲಿನ ನಿವಾಸಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಂಡು ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ದೇಗುಲ ಪ್ರವೇಶ ನಿಷಿದ್ಧ: ತಾಲೂಕಿನ ಲಕ್ಕೇನಹಳ್ಳಿ ದೇವಾಲಯವೊಂದಕ್ಕೆ ತೆರಳಲು ಮುಂದಾದ ಸಂದರ್ಭದಲ್ಲಿ  ದಲಿತರು ಎಂಬಕಾರಣಕ್ಕೆ ದೇವಾಲಯ ಒಳಪ್ರವೇಶಿಸದಂತೆ  ಬಾಗಿಲು ಹಾಕಿದರು. ತಾಲೂಕಿನಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ದಲಿತ ಮಹಿಳೆ ತಮಟೆ ನರಸಮ್ಮ ಒತ್ತಾಯಿಸಿದರು. ಹಳೇಗುಬ್ಬಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾಗಿದ್ದ ನಿವೇಶನವನ್ನು ಗ್ರಾಮದ ಕೆಲ ಮುಖಂಡರು ಬಲವಂತವಾಗಿ ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಅಧಿಕಾರಿಗಳು ಸೂಕ್ರ ಕ್ರಮಕೈಗೊಂಡು ನಿವೇಶನವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ದಲಿತ ಮುಖಂಡರು ಚರ್ಚಿಸಿದ ಎಲ್ಲಾ ದೂರುಗಳನ್ನು ಗಂಭಿರವಾಗಿ ಪರಿಗಣಿಸಿದ ಸಿಪಿಐ ಕುಮಾರಪ್ಪ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಪಿ.ಎಸ್.ಐ ಗಳಾದ ಉಜ್ಜೀನಪ್ಪ, ರವಿಕುಮಾರ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ನಿಟ್ಟೂರು ರಂಗಸ್ವಾಮಿ, ಮಾರನಹಳ್ಳಿ ಶಿವಯ್ಯ, ಜಿ.ಸಿ. ದುರ್ಗೇಶ್, ಜಿ.ಸಿ.ನಾಗರಾಜು, ದೇವರಾಜು, ನಿಟ್ಟೂರು ಕೃಷ್ಣಮೂರ್ತಿ, ಅರಿವೆಸಂದ್ರ ಲೋಕೇಶ್, ಮೆಳೆಕಲ್ಲಹಳ್ಳಿ ಯೋಗೀಶ್, ಕಿಟ್ಟದಕುಪ್ಪೆ ನಾಗರಾಜು, ದಲಿತ ಗಂಗಣ್ಣ, ಚೇಳೂರು ಶಿವನಂಜಪ್ಪ ಸೇರಿದಂತೆ ತಾಲೂಕಿನ ದಲಿತ ಮುಖಂಡರುಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement