ರೈತರ ಬಂಧನ ಖಂಡಿಸಿ ಪ್ರತಿಭಟನೆ
ಹುಳಿಯಾರು: ನೀರಾವರಿ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳುವುದರ ಮೂಲಕ ರೈತರಿಗೆ ಅನ್ಯಾಯ ಎಸಗಲಾಗಿದ್ದು ಅದಕ್ಕೆ ನ್ಯಾಯ ಕೇಳಲು ಹೋದ ರಾಜ್ಯ ರೈತಸಂಘದ ನಾಯಕರು ಹಾಗೂ ಕಾರ್ಯಕರ್ತರನ್ನು ಜ.27ರಂದು ಬೆಂಗಳೂರಿನಲ್ಲಿ ಬಂಧಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಬಂಧಿತರನ್ನು ಬಿಡುಗಡೆಗೊಳಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹುಳಿಯಾರಿನ ರೈತಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತಸಂಗದ ಮಲ್ಲಿಕಣ್ಣ ಮಾತನಾಡಿ, ಸರ್ಕಾರ ಚುನಾವಣ ಸಂದರ್ಭಗಳಲ್ಲಿ ಮಾತ್ರ ರೈತರ ಬಗ್ಗೆ ಗಮನ ಕೊಡುವುದನ್ನು ಬಿಟ್ಟರೆ ಉಳಿದಂತೆ ಮೌವ ನಹಿಸಿ ಕೂತಿದೆ. ಅಸಮರ್ಪಕ ವಿದ್ಯುತ್ ಪೂರೈಕೆ, ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ರೈತ ಕಂಗಾಲಾಗುತ್ತಿರುವುದು ಸೇರಿದಂತೆ ಇಂತಹ ಅನೇಕ ಸಮಸ್ಯೆಗಳನ್ನು ಕಂಡರೂ ಕಾಣದಂತೆ ರಾಜ್ಯ ಆಡಳಿತ ನಡೆಸುತ್ತಾ ರೈತರನ್ನು ಕಡೆಗಣಿಸುತ್ತಿದೆ ಎಂದರು.
ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಗಳಿದ್ದರೂ ಅವುಗಳನ್ನು ಜಾರಿ ಮಾಡದೆ ತಮ್ಮ ತಮ್ಮಲ್ಲೇ ರಾಜಕೀಯ ಮಾಡಿಕೊಂಡು ರೈತರನ್ನು ಬಲಿಪಶು ಮಾಡುತ್ತಿದೆ. ಮಾರುಕಟ್ಟೆಯಲ್ಲಿ ದಿನನಿತ್ಯ ಬಳಸುವ ಎಲ್ಲ ಪದಾರ್ಥಗಳ ಬೆಲೆಯಲ್ಲಿ ಏರಿಯಾಗುತ್ತಿದ್ದರೂ ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಇಂತಹ ಅನ್ಯಾಯ, ಸಮಸ್ಯೆಗಳನ್ನು ಬಗೆಹರಿಸುವಂತೆ ಕೇಳ ಹೋದ ನಮ್ಮ ರೈತಸಂಘದವರನ್ನು ಬಂಧಿಸಲು ಮುಂದಾಗಿರುವ ಸರ್ಕಾರ ಅವರನ್ನು ಬಿಡುಗಡೆಗೊಳಿಸದಿದಲ್ಲಿ ಉಗ್ರ ಹೋರಾಟ ನಡೆಸಲಾಗುದೆಂದು ಎಚ್ಚರಿಸಿದರು.
ಉಪತಹಶೀಲ್ದಾರ್ ಹನುಮಂತನಾಯಕ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಲ್ಲಪ್ಪ, ಪಾತ್ರೆ ಸತೀಶ್, ರಘು, ಯೋಗಣ್ಣ ಸೇರಿದಂತೆ ರೈತಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.