ಅಂಗವಿಕಲರ ಪ್ರತಿಭಟನೆ, ಜಿಲ್ಲಾಧಿಕಾರಿಗಳಿಗೆ ಮನವಿ
ತುಮಕೂರು: ಅಂಗವಿಕಲರ ಶ್ರಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿ.ಆರ್. ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂಗಳ ಗೌರವಧನ ಹೆಚ್ಚಿಸಬೇಕು. ಅವರ ಸೇವೆಯನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ನೂರಾರು ಅಂಗವಿಕಲರು ನಗರದ ಕೋಟೆ ಅಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ಸಿ.ಗಂಗರಾಜು ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಅಂಗವಿಕಲ ವಿಆರ್‌ಡಬ್ಲ್ಯೂ ಮತ್ತು ಎಆರ್‌ಡಬ್ಲ್ಯೂಗಳು ಸರಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರಾದ ಚಿತ್ತಯ್ಯ, 2007 ರ ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯಡಿ ಹಲವಾರು ಅಂಗವಿಕಲರು ವಿ.ಆರ್. ಡಬ್ಲ್ಯೂ, ಎಂಆರ್ ಡಬ್ಲ್ಯೂಗಳಾಗಿ ನೇಮಕವಾಗಿ ಗ್ರಾಮೀಣ ಭಾಗದಲ್ಲಿ ವಾಸುತ್ತಿರುವ ಅಂಗವಿಕಲರಿಗೆ ಸಾಮಾಜಿಕ, ಶೈಕ್ಷಣಿಕ,ಅರ್ಥಿಕ ಮತ್ತು ವೈದ್ಯಕೀಯ ಪುನರ್ವಸತಿ ಒದಗಿಸುವ ಕೆಲಸ ಮಾಡುತ್ತಿದ್ದು,ಇವರಿಗೆ ನೀಡುತ್ತಿರುವ ಗೌರವಧನ ಅತ್ಯಂತ ಕಡಿಮೆ ಇದೆ. ಇಂದಿನ ಅಗತ್ಯವಸ್ತುಗಳ ಬೆಲೆ ಏರಿಕೆ ಕಾಲದಲ್ಲಿ ನಾವುಗಳು ಪಡೆಯುತ್ತಿರುವ ಗೌರವಧನದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನಮ್ಮ ಗೌರವಧನವನ್ನು ಇಂದಿನ ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚು ಮಾಡಬೇಕು ಎಂದರು.
ಈಗಾಗಲೇ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳಿಗೆ ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ ಗಳನ್ನೇ ನೇಮಕ ಮಾಡಿಕೊಳ್ಳಬೇಕು. ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ನೀಡಬೇಕು. ಮಹಿಳೆಯರಿಗೆ ಹೆರಿಗೆಯಾದ ಸಂದರ್ಭದಲ್ಲಿ ಗೌರವಧನದ ಸಮೇತ ರಜೆ ನೀಡಬೇಕು. ಇವರನ್ನು ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಡಿಸಬೇಕು ಹಾಗೂ ಪ್ರವಾಸ ಭತ್ಯೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ತಿಳಿಸಿದರು.