ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ರೈತರು
ತುರುವೇಕೆರೆ: ತುಂಬಿದ ಕೆರೆಗೆ ಗಂಗಾ ಪೂಜೆ ಸಲ್ಲಿಸಿದ ನಂತರ ಬೆಳೆಗಳಿಗೆ ನೀರು ಬಿಡುಗಡೆ ಮಾಡುವ ಸಲುವಾಗಿ ಸಡಗರದಿಂದ ಕೆರೆ ಏರಿ ಮೇಲೆ ಬಂದಿದ್ದ ರೈತರಿಗೆ, ಅಧಿಕಾರಿಗಳು ನೀರನ್ನು ಬಿಡಲು ಸಾಧ್ಯವಿಲ್ಲ ಎಂದಾಗ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಇಳಿದ ಘಟನೆ ಶುಕ್ರವಾರ ನಡೆದಿದೆ.
ಅಷ್ಟೇ ಅಲ್ಲದೇ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿಸಿದ ಕ್ರಮಕ್ಕೂ ಕೋಪಗೊಂಡ ರೈತರು ಪ್ರತಿಭಟನೆಗೆ ಇಳಿದರು. ಮಾಚೇನಹಳ್ಳಿ - ಸಾರಿಗೇಹಳ್ಳಿ ಕೆರೆಯ ಬಳಿ ನಡೆದ ಈ ಘಟನೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಮಾಚೇನಹಳ್ಳಿ, ಸಾರಿಗೇಹಳ್ಳಿ, ಹುಲ್ಲೇಕೆರೆ ಮುಂತಾದ ಹತ್ತಾರು ಗ್ರಾಮದ ಜನರಿಗೆ ಸಾರಿಗೇಹಳ್ಳಿ ಕೆರೆಯೇ ಜೀವನಾಧಾರ. ಹೇಮಾವತಿ ಕೃಪೆಯಿಂದಾಗಿ ಕೆರೆ ಸಂಪೂರ್ಣ ತುಂಬಿದೆ. ಸಂಕ್ರಾಂತಿ ನಂತರ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವುದು ಹಿಂದಿನಿಂದಲೂ ಬಂದಿದ್ದ ನಿಯಮ. ಕಳೆದ ಐದಾರು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಸಭೆಯಲ್ಲಿ ತಾಲೂಕಿನಲ್ಲಿ ತುಂಬಿರುವ ಕೆಲವು ಕೆರೆಗಳ ಮೂಲಕ ಅಲ್ಪಕಾಲೀನ ಬೆಳೆಗಳಿಗೆ ನೀರು ಹರಿಸಬಹುದು ಎಂದು ಸೂಚಿಸಲಾಗಿತ್ತು. ಆದರೆ ಸಾರಿಗೇಹಳ್ಳಿ ಕೆರೆ ಸಂಪೂರ್ಣ ತುಂಬಿದ್ದರೂ ಸಹ ಹೇಮಾವತಿ ಅಧಿಕಾರಗಳು ಈ ಕೆರೆಯ ಬಗ್ಗೆ ಪ್ರಸ್ತಾಪಿಸದೇ ಇರುವ ಕಾರಣ ಕೆರೆಗಳಿಂದ ನೀರು ಬಿಡುಗಡೆ ಮಾಡುವ ಪಟ್ಟಿಯಲ್ಲಿ ಈ ಕೆರೆಯ ಹೆಸರನ್ನು ಕೈಬಿಡಲಾಗಿತ್ತು.
ತರಾಟೆಗೆ: ಇದನ್ನು ಖಂಡಿಸಿದ ರೈತರು ಕೆರೆ ಸಂಪೂರ್ಣ ತುಂಬಿದ್ದರೂ ಯಾವ ಕಾರಣಕ್ಕೆ ಕೆರೆಯ ಹೆಸರನ್ನು ಕೈಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಿ ಎಂದು ಸ್ಥಳಕ್ಕೆ ಧಾವಿಸಿದ್ದ ತಹಸೀಲ್ದಾರ್ ನಂಜಪ್ಪ ಹಾಗೂ ಹೇಮಾವತಿ ನಾಲಾ ಅಧಿಕಾರಿ ರಾಮಚಂದ್ರಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ಹೇಮಾವತಿ ಅಧಿಕಾರಿಗಳ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಲೆಕ್ಕದಲ್ಲಿ ಈ ಕೆರೆಯ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ರೈತರೇ ಕೆರೆಯ ನೀರನ್ನು ತಮ್ಮ ಬೆಳೆಗಳಿಗೆ ಏಕೆ ಬಿಟ್ಟುಕೊಳ್ಳಬಾರದು ಎಂದು ರೈತರು ಅಧಿಕಾರಿಗಳ ಬೆವರು ಇಳಿಸಿದರು.
ಮಲತಾಯಿ ಧೋರಣೆ: ತಾಲೂಕಿನ ಐದಾರು ಕೆರೆಗಳು ತುಂಬಿದ್ದು ಅವುಗಳಿಂದ ಮಾತ್ರ ಬೆಳೆಗಳಿಗೆ ನೀರು ಬಿಡಬಹುದು ಎಂದು ಆದೇಶ ನೀಡಿರುವುದು ಮಲತಾಯಿ ಧೋರಣೆ ಮಾಡಿದಂತಾಗುತ್ತದೆ. ಕೆರೆ ತುಂಬಿದ್ದರೂ ಬೆಳೆಗಳಿಗೆ ನೀರು ಬಿಡುಗಡೆ ಮಾಡದಿದ್ದರೆ ರೈತರು ಬೆಳೆದಿರುವ ಬೆಳೆಗಳಿಗೆ ಆಗುವ ನಷ್ಟವನ್ನು ತುಂಬಿಕೊಡುವವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ರೈತರು ಕೇಳಿದ ಪ್ರಶ್ನೆಗಳಿಗೆ ತಹಸೀಲ್ದಾರ್ ನಂಜಪ್ಪನವರಾಗಲೀ, ಹೇಮಾವತಿ ನಾಲಾ ಅಧಿಕಾರಿ ರಾಮಚಂದ್ರ ನವರಾಗಲೀ ಉತ್ತರಿಸಲು ಸಾಧ್ಯವಾಗಲಿಲ್ಲ. ಕಾವೇರಿ ನೀರಾವರಿ ಸಲಹಾ ಸಮಿತಿ ಯಾವ ಆದೇಶ ನೀಡಿದೆಯೋ ಅದನ್ನು ಪಾಲಿಸಲು ಮಾತ್ರ ತಾವು ಸಿದ್ಧ ಎಂದು ತಹಸೀಲ್ದಾರ್ ನಂಜಪ್ಪ ರೈತರಿಗೆ ಹೇಳಿದರು. ಇದಕ್ಕೆ ಒಪ್ಪದ ರೈತರು ಪಟ್ಟ ಬಿಡದೇ ಪ್ರತಿಭಟನೆಗೆ ಮುಂದಾದರು.
ಸಂಸದರ ಭೇಟಿ: ಸಾಯಂಕಾಲದ ವೇಳೆಗೆ ಸಂಸದ ಜಿ.ಎಸ್.ಬಸವರಾಜು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಗೆ ಆಗಿರುವ ಸಂಕಟವನ್ನು ಅರಿತುಕೊಂಡರು. ಹೇಮಾವತಿ ನಾಲಾ ಅಧಿಕಾರಿಗಳು ಮಾಡಿರುವ ಪ್ರಮಾದದಿಂದ ರೈತರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಸಮ್ಮುಖವೇ ಕುಳಿತು ಬಗೆಹರಿಸುವುದು ಸೂಕ್ತ ಎಂದು ಹೇಳಿ ತಮ್ಮೊಂದಿಗೆ ನಾಲ್ಕೈದು ರೈತ ಮುಖಂಡರನ್ನು ತುಮಕೂರಿಗೆ ಕರೆದುಕೊಂಡು ಹೋದರು.
ಸಿಪಿಐ ಕೃಷ್ಣಕುಮಾರ್, ಎಸೈಗಳಾದ ರಾಚಯ್ಯ, ದಂಡಿನಶಿವರ ಪಿಎಸ್‌ಐ ಪ್ರೀತಮ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.
ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಹಾಗೂ ರೈತ ಮುಖಂಡ ಮಾಚೇನಹಳ್ಳಿ ವಿಶ್ವನಾಥ್, ರಾಮಣ್ಣ, ಅರಳೀಕೆರೆ ಶಿವಯ್ಯ, ರವಿಕುಮಾರ್, ಮಾಚೇನಹಳ್ಳಿ ಲೋಕೇಶ್, ಶಿವಯೋಗೀಶ್ವರ ಸ್ವಾಮಿ ಮೊದಲಾದ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.