ಗುಬ್ಬಿಗೆ ಹೇಮೆ ನೀರು ಹರಿಸದ ತಾರತಮ್ಯಕ್ಕೆ ಆಕ್ರೋಶ
ಗುಬ್ಬಿ: ತಾಲೂಕಿನಲ್ಲಿಯೇ ಹೇಮಾವತಿ ನೀರು ಹರಿಯುತ್ತಿದ್ದರೂ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸದೆ ಶಿರಾ ತಾಲೂಕಿಗೆ ನೀರು ಹರಿಸಿದ ಅಧಿಕಾರಿಗಳ ತಾರತಮ್ಯ ನೀತಿ ವಿರುದ್ಧ ತಾಲೂಕು ಪಂಚಾಯಿತಿ ಸದಸ್ಯರು ಕಿಡಿಕಾರಿದ ಘಟನೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜರುಗಿತು.
ತಾಪಂ ಅಧ್ಯಕ್ಷ ಕೆ.ಎನ್.ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದ ಇಲಾಖಾವಾರು ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು ನಿಯಾಮಾನುಸಾರ ಸಮಯಕ್ಕೆ ಸರಿಯಾಗಿ ನೀರು ಹರಿಸದ ಅಧಿಕಾರಿಗಳು ಜಿಲ್ಲಾ ಮಂತ್ರಿ ಜಯಚಂದ್ರ ಅವರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೃಷ್ಣ ಮೇಲ್ದಂಡೆಗೆ ಹೇಮೆ ಹರಿಸಿರುವುದು ಕಾನೂನು ಬಾಹಿರ. ಇಂತಹ ಅಧಿಕಾರಿಗಳನ್ನು ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತೊಂದರೆ ನೀಡುತ್ತಿದ್ದಾರೆ: ಚುನಾಯಿತ ಪ್ರತಿನಿಧಿಗಳು ಹಗಲು ರಾತ್ರಿ ಕಾದು ಗೇಟ್ ತೆರೆದು ನೀರು ಹರಿಸಿಕೊಳ್ಳುವ ಅನಿವಾರ್ಯ ಸೃಷ್ಟಿ ಮಾಡಿದ ಅಧಿಕಾರಿಗಳು ನಮ್ಮ ಹಕ್ಕಿನ ನೀರನ್ನು ನೀಡದೆ ಸಾಕಷ್ಟು ತೊಂದರೆ ನೀಡಿದ್ದಾರೆ. ರೈತರ ಕೈಗೆ ಸಿಗದೆ, ಫೋನ್ ಮಾಡಿದವರಿಗೆ ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡಿದ್ದಾರೆ. ಜತೆಯಲ್ಲಿ ಗೇಟ್ ಮುಚ್ಚುವ ಕಾರ್ಯ ಮಾತ್ರ ಮಾಡಿದ್ದಾರೆ ಎಂದು ಆರೋಪಿಸಿದ ಸದಸ್ಯ ಶಶಿಧರ್ ತಾಲೂಕಿನ ಪ್ರಮುಖ ಕೆರೆಗಳಾದ ಕಡಬ ಹಾಗೂ ಗುಬ್ಬಿ ಅಮಾನಿಕೆರೆಗೆ ಶೇ.25 ರಷ್ಟು ನೀರು ಹರಿಸಿರುವುದು ಈ ಭಾಗದ ರೈತರಿಗೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಶಿಸ್ತು ಕ್ರಮ: ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಅರ್ಹ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡುವ ಬಗ್ಗೆ ಸೂಚಿಸಿದ ಸದಸ್ಯರು ಅನುದಾನಿತ ಶಾಲೆಗಳಲ್ಲಿ ಶೇ.25 ರ ಪ್ರಮಾಣದಲ್ಲಿ 186 ಮಕ್ಕಳಿಗೆ ಈ ಬಾರಿ ದಾಖಲಾತಿ ಬಗ್ಗೆ ಶಿಸ್ತು ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯು ಫ್ಲಾಂಟೇಷನ್ ನಿರ್ಮಾಣ ಮಾಡಲು ಸಸಿ ನೆಟ್ಟಿದೆ. ನೀರುಣಿಸಿ ಸಸಿ ಬೆಳೆಸುವ ವಿಚಾರದಲ್ಲಿ ಮಾತ್ರ ಗ್ರಾಮ ಪಂಚಾಯಿತಿ ಹೊಣೆ ಎನ್ನುವರು ಎಂದು ಕಿಡಿಕಾರಿದ ಸದಸ್ಯ ಫಯಾಜ್ ಖಾನ್ ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಲು ಸೂಚಿಸಿದರು. ತಾಲೂಕಿನಲ್ಲಿ ಕಾಲು ಬಾಯಿ ರೋಗದಿಂದ 56 ರಾಸುಗಳ ಈವರೆಗೆ ಸಾವನ್ನಪ್ಪಿದೆ. ರಾಸುಗಳ ಮಾಲೀಕರಿಗೆ ಪರಿಹಾರ ಒದಗಿಸಲು 9.51 ಲಕ್ಷ ರು.ಗಳ ಹಣ ಬಿಡುಗಡೆಗೆ ಕಾಯಲಾಗಿದೆ ಎಂದು ಪಶು ಇಲಾಖಾ ಸಹಾಯಕ ನಿರ್ದೇಶಕ ಡಾ.ಪಾಂಡುರಂಗಪ್ಪ ತಿಳಿಸಿದರು.
ಆಕ್ರೋಶ: ನಂತರ ಅಕ್ರಮ ಮದ್ಯ ಮಾರಾಟದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಎಲ್ಲಾ ಸದಸ್ಯರು ಮುಂದಿನ ಸಭೆಗೆ ಮುನ್ನ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಿರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಸಭೆಗೆ ಹಾಜರಾಗದ 8 ಇಲಾಖೆಯ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವುದಾಗಿ ಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ್ ತಿಳಿಸಿದರು.
ಶಿಕ್ಷಣ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಲೋಕೋಪಯೋಗಿ, ಮೀನುಗಾರಿಕೆ ಸೇರಿದಂತೆ 20 ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಉಪಾಧ್ಯಕ್ಷೆ ಚಿಕ್ಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತೀರ್ಥಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.