ಜಾತಿ, ಧರ್ಮ ಆಧಾರಿತ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಧರ್ಮೇಂದ್ರ
ಕುಣಿಗಲ್: ಜಾತಿ, ಧರ್ಮ ಆಧಾರಿತ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಜನಪರ ಸಮಸ್ಯೆಗಳಿಗೆ ಸ್ಪಂದಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತ ಜನಪ್ರತಿನಿಧಿಗಳ ಆಯ್ಕೆಯ ನಿಟ್ಟಿನಲ್ಲಿ ಮತದಾರರು ಜಾಗೃತರಾಗಿ ತಮ್ಮ ಹಕ್ಕು ಚಲಾಯಿಸಿದಾಗ ಉತ್ತಮ ಸಮಾಜ ರೂಪುಗೊಂಡು ಬಲಿಷ್ಠ ಪ್ರಜಾಪ್ರಭುತ್ವ
ವ್ಯವಸ್ಥೆ ಜಾರಿಯಲ್ಲಿರುತ್ತೆ ಎಂದು ಸಿಪಿಐ ಧರ್ಮೇಂದ್ರ ತಿಳಿಸಿದರು.
ಪಟ್ಟಣದ ಜಿಕೆಬಿಎಂಎಸ್ ಶಾಲೆಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತದಾನದಂತಹ ಉತ್ತಮ ಪ್ರಕ್ರಿಯೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಪೂರಕವಾದಂತ ಪ್ರಕ್ರಿಯೆಯಾಗಿದೆ. ಮತದಾರರಿಲ್ಲಿ ಜಾಗೃತಿಯ ಕೊರೆಯಿಂದಾಗಿ ಚುನಾವಣೆ ಸಮಯದಲ್ಲಿ ಉತ್ತಮ ಜನಪ್ರತಿನಿಧಿಯ ಆಯ್ಕೆಗೆ ಒಲವು ತೋರದೆ ಕೆಲ ಕಾರಣಗಳಿಂದ ನಿರ್ಲಕ್ಷಿಸುವ ಮನೋಭಾವದಿಂದ ಮುಂದಿನ ಅವಧಿಯಲ್ಲಿ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗುತ್ತದೆ.ಇಂತಹ ಸ್ಥಿತಿಯಿಂದ ಪಾರಾಗಲು ಮತದಾರರು ತಮ್ಮ ಕರ್ತವ್ಯದ ಬಗ್ಗೆ ಜಾಗೃತರಾಗಿ ಚಿಂತಿಸಿ,ತಮ್ಮ ಹಕ್ಕನ್ನು ಸಮರ್ಥ ವ್ಯಕ್ತಿಯ ಪರವಾಗಿ ಚಲಾಯಿಸಿದಾಗ ಸುಭದ್ರ ಆಡಳಿತಕ್ಕೆ ಸಹಕಾರಿಯಾಗುತ್ತದೆ ಎಂದರು.
ಖೇದಕರ: ಅಧ್ಯಕ್ಷತೆವಹಿಸಿ ಮಾತನಾಡಿದ ತಹಸೀಲ್ದಾರ್ ಪುಟ್ಟನರಸಯ್ಯ, ವಿದ್ಯಾವಂತ ಮತದಾರರು ಮತಚಲಾವಣೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ನಿಜಕ್ಕೂ ಖೇದಕರ ಸಂಗತಿ ಮುಂದಿನ ದಿನಗಳಲ್ಲಿ ವಿದ್ಯಾವಂತರು ತಮ್ಮ ಪಾಲಿನ ಹಕ್ಕನ್ನು ಚಲಾಯಿಸಿ, ಸುಭದ್ರ ಪ್ರಜಾಪ್ರಭತ್ವ ವ್ಯವಸ್ಥೆ ನಿರ್ಮಾಣಕ್ಕೆ ಸಹಕರಿಸಬೇಕೆಂದರು. ಪಿಎಸೈ ಗುರುಪ್ರಸಾದ್, ಚುನಾವಣೆ ಸಮಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳಿಗೂ ಮತದಾನ ಮಾಡುವ ಹಕ್ಕಿದ್ದು, ಕೆಲ ಕಾರಣಗಳಿಂದ ನಿಗದಿತ ಸಮಯದೊಳಗೆ ನಿರ್ವಹಿಸಲು ತೊಡಕಾಗುತ್ತಿದ್ದು, ತಹಸೀಲ್ದಾರ್ ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯೆ ಮಂಜು, ಮರಣಹೊಂದಿದ ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ತೀವ್ರ ವಿಳಂಬ ಮಾಡುತ್ತಿರುವುದು ಹಲವು ಸಮಸ್ಯೆಗೆ ಕಾರಣವಾಗುತ್ತಿದ್ದು ಕ್ರಮಕೈಗೊಳ್ಳಬೇಕೆಂದರು. ಮತದಾರರ ದಿನಾಚರಣೆಯಲ್ಲಿ ಮತದಾರರ ಸಹಭಾಗಿತ್ವ ಕೊರತೆಯಾಗಿತ್ತು. ಶಿರಸ್ತೆದಾರ್ ತಿಮ್ಮಯ್ಯ, ಬಿಪಿಇಒ ಗೋಪಾಲಕೃಷ್ಣ ಸೇರಿದಂತೆ ಬಿಎಲ್ಒ ಅಧಿಕಾರಿಗಳು ಪಾಲ್ಗೊಂಡಿದ್ದರು.