ಸಚಿವ ಆಂಜನೇಯ ಮೇಲೆ ಹಲ್ಲೆ ಯತ್ನ: ಖಂಡನೆ
ಪಾವಗಡ: ಗುರುವಾರ ವಿಧಾನ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರ ಮೇಲೆ ಕೈ ಎತ್ತಿ ಅವಹೇಳನ ಮಾಡಿರುವ ಶಾಸಕರೊಬ್ಬರ ಕ್ರಮವನ್ನು ಇಲ್ಲಿನ ದಲಿತ ಪರ ಸಂಘಟನೆಗಳು ಖಂಡಿಸಿವೆ. ತಾ. ಕಾಂಗ್ರೆಸ್ ಮುಖಂಡ ಕೋರ್ಟ್ ನರಸಪ್ಪ ದಲಿತ ಮುಖಂಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಅಂಜನೇಯ ಅವರ ಮೇಲೆ ಕೈ ಮಾಡಲು ಮುಂದಾಗಿದ್ದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರ ವರ್ತನೆಯನ್ನು ದಲಿತ ಮುಖಂಡರು ಸೇರಿದಂತೆ ಇಲ್ಲಿನ ಸಂಘಟನೆಗಳು ಖಂಡಿಸುತ್ತಿವೆ ಎಂದರು. ಸಮಸ್ಯೆಯನ್ನು ಸ್ವೀಕರ್ ಮೂಲಕ ಬಗೆ ಹರಿಸಿಕೊಳ್ಳದೇ ಏಕಾಏಕಿ ಸಚಿವರ ಮೇಲೆ ಶಾಸಕ ನರೇಂದ್ರ ಸ್ವಾಮಿ ಕೈ ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಸಚಿವರ ಮೇಲೆ ನಡೆಸಿದ ಅವಹೇಳನ ಮತ್ತು ದೌರ್ಜನ್ಯದ ಕ್ರಮವನ್ನು ದಲಿತ ಪರ ಸಂಘಟನೆಗಳು ಖಂಡಿಸಿವೆ ಎಂದರು. ಈ ಬಗ್ಗೆ ಶನಿವಾರ ಪಟ್ಟಣದಲ್ಲಿ ದಲಿತ ಮುಖಂಡರು ಮತ್ತು ವಿವಿಧ ಸಂಘಟನೆಗಳ ಸಭೆ ಸೇರಿ ಚರ್ಚಿಸಿ ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು.