ಸತ್ಯಾಗ್ರಹದಿಂದ ಬ್ರಿಟೀಷರಿಗೆ ಬಿಸಿ ಮುಟ್ಟಿಸಿದ ಗಾಂಧೀಜಿ
ತುಮಕೂರು: ತುಮಕೂರಿನಲ್ಲಿ ಅಹಿಂದ ಸಂಘಟನೆವತಿಯಿಂದ ಕಾಲ್ ಟೆಕ್ಸ್ ಸರ್ಕಲ್ನಲ್ಲಿರುವ ಅಹಿಂದ ಕಚೇರಿಯಲ್ಲಿ ಸಂಸ್ಮರಣಾ ದಿನವನ್ನು ಆಚರಿಸಲಾಯಿತು.
ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗಾಂಧಿ ಸಂಸ್ಮರಣಾ ದಿನಾಚರಣೆಯಲ್ಲಿ ಗಾಂಧಿಜೀಯವರ ಅಹಿಂಸೆ, ಸತ್ಯಾಗ್ರಹದ ಕುರಿತು ಭಾಗವಹಿಸಿದ್ದ ಮುಖಂಡರುಗಳು ಮಾತನಾಡಿದರು.
ಅಹಿಂದ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ತು.ಬಿ.ಮಲ್ಲೇಶ್ ಮಾತನಾಡಿ, ಉಪ್ಪಿನ ಸತ್ಯಾಗ್ರಹ ಆರಂಭಿಸಿ ಬ್ರಿಟೀಷರಿಗೆ ಬಿಸಿ ಮುಟ್ಟಿಸಿದ ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗಾಂಧೀಜಿಯ ಮಾರ್ಗದರ್ಶನ ಇಲ್ಲದಿದ್ದರೆ ಸ್ವಾತಂತ್ರ್ಯ ಹೋರಾಟ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ಯಲ್ಲಪ್ಪ ಮಾತನಾಡಿ, ಮಹಾತ್ಮಗಾಂಧಿಯವರು ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ಸತ್ಯಾಗ್ರಹ ಪರಿಕಲ್ಪನೆಯನ್ನು ಪರಿಚಯಿಸಿದರು. ಸತ್ಯ ಮತ್ತು ಅಹಿಂಸೆ ಎಂಬ ಎರಡು ಮಹಾನ್ ಅಸ್ತ್ರಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಅನುಸರಿಸುವ ಮೂಲಕ ಇಂದು ಪ್ರಪಂಚದ ಅನೇಕ ಜನತೆ ಗಾಂಧಿಯ ಹೆಸರನ್ನು ತಮ್ಮ ಅನ್ವರ್ಥ ನಾಮವಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ನಿಧನರಾದ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಸೇರಿದಂತೆ ಅನೇಕ ಮಹಾನ್ ನಾಯಕರು ಗಾಂಧಿ ತತ್ವಗಳನ್ನು ಗಾಂಧೀಜಿಯವರ ಪ್ರತಿರೂಪ ಎಂದೇ ನಂಬಿದ್ದಾರೆ. ಇಂತಹ ಮಹಾನ್ ಚೇತನದ ಸಂಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉಪಾಧ್ಯಕ್ಷ ಹನುಮಂತಯ್ಯ ಮಾತನಾಡಿ, ವಿಶ್ವ ಇಂದು ಶಾಂತಿ, ನೆಮ್ಮದಿಯಿಂದ ಇದ್ದರೆ ಅದಕ್ಕೆ ಗಾಂಧೀಜಿಯವರು ನೀಡಿದ ಅಹಿಂಸೆ ಮತ್ತು ಸತ್ಯಾಗ್ರಹ ಎಂಬ ಅಸ್ತ್ರಗಳೇ ಕಾರಣ. ಕೋಮುಸೌಹಾರ್ದತೆಗೆ ಬುನಾದಿಯಾಗಿದೆ ಎಂದರು.
ಅಹಿಂದ ಮುಖಂಡ ಮುಸ್ತಾಕ್ ಅಹಮದ್ ಮಾತನಾಡಿ, ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸಲು ಗಾಂಧೀಜಿ ಎಂದಿಗೂ ಇಷ್ಟಪಟ್ಟಿರಲಿಲ್ಲ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ವಿಭಜನೆಗೆ ಒಪ್ಪಿಕೊಂಡರು. ಎಲ್ಲ ಧರ್ಮದವರು ಒಗ್ಗೂಡಿ ಬದುಕು ನಡೆಸಬೇಕೆಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು ಎಂದರು. ಅಹಿಂದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಚಿಕ್ಕರಾಜು, ಮುಖಂಡರಾದ ನಾಗೇಶ್, ಚಂದ್ರಶೇಖರ್, ರಮೇಶ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.